ಚೆಟ್ಟಳ್ಳಿ, ಅ. 25: ಸಮೀಪದ ಪೊನ್ನತ್ಮೊಟ್ಟೆಯ ಗೋಲ್ಡನ್ ಬಾಯ್ಸ್ ವತಿಯಿಂದ ಪೊನ್ನತ್ಮೊಟ್ಟೆಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಸೂಪರ್ ಫೈವ್ಸ್ ಕಾಲ್ಚೆಂಡು ಪಂದ್ಯಾಟದಲ್ಲಿ ಅಮಿಟಿ ಯುನೈಟೆಡ್ ಗದ್ದೆಹಳ್ಳ ತಂಡವು ಫೈನಲ್ ಪಂದ್ಯದಲ್ಲಿ ಆತಿಥೇಯ ಗೋಲ್ಡನ್ ಬಾಯ್ಸ್ ತಂಡವನ್ನು 1-0 ಗೋಲುಗಳ ಅಂತರ ದಿಂದ ಸೋಲಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಆತಿಥೇಯ ಗೋಲ್ಡನ್ ಬಾಯ್ಸ್ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಇದಕ್ಕೂ ಮುನ್ನ ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಕೆ.ಎನ್.ಸಿ. ಕಂಡಕರೆ ಹಾಗೂ ಅಮಿಟಿ ಯುನೈಟೆಡ್ ತಂಡಗಳ ನಡುವೆ ನಡೆಯಿತು. ಅಮಿಟಿ ಯುನೈಟೆಡ್ ತಂಡವು ಪೆನಾಲ್ಟಿ ಶೂಟೌಟ್‍ನಲ್ಲಿ 2-1 ಗೋಲುಗಳ ಅಂತರದಿಂದ ಕೆ.ಎನ್.ಸಿ. ತಂಡವನ್ನು ಮಣಿಸಿ ಫೈನಲ್‍ಗೆ ಲಗ್ಗೆಯಿಟ್ಟಿತ್ತು.
ಎರಡನೇ ಸೆಮಿಫೈನಲ್ ಪಂದ್ಯವು ಆತಿಥೇಯ ಗೋಲ್ಡನ್ ಬಾಯ್ಸ್ ಪೊನ್ನತ್ಮೊಟ್ಟೆ ಹಾಗೂ ಸಿ.ಸಿ.ಎಫ್.ಸಿ. ಕಾಫಿ ಬೋರ್ಡ್ ತಂಡಗಳ ನಡುವೆ ನಡೆಯಿತು. ಗೋಲ್ಡನ್ ಬಾಯ್ಸ್ ತಂಡವು 1-0 ಗೋಲುಗಳ ಅಂತರದಿಂದ ಗೆಲವು ಸಾಧಿಸಿ ಫೈನಲ್ ಪ್ರವೇಶಿಸಿತು.
ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದು, ಪಂದ್ಯಾಟದ ಅತೀ ಹೆಚ್ಚು ಗೋಲ್ ಬಾರಿಸಿದ ಆಟಗಾರ ಪ್ರಶಸ್ತಿಯನ್ನು ಅಮಿಟಿ ಯುನೈಟೆಡ್ ತಂಡದ ಸ್ವಾದಿಕ್ ಪಡೆದುಕೊಂಡರು. ಜಂಶಾದ್, ಆಲಿ, ವಿರೂಪಾಕ್ಷ ಪಂದ್ಯಾಟದ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.
ಪ್ರಶಸ್ತಿ ವಿತರಣಾ ಕಾರ್ಯ ಕ್ರಮದಲ್ಲಿ ಟ್ರೋಫಿ ದಾನಿಗಳಾದ ಹಮೀದ್, ಆಯೋಜಕರಾದ ನೌಶಾದ್, ಮಜೀದ್, ಉನೈಸ್, ಸಿಯಾಬ್, ಮಶೂದ್, ನವೀನ್, ರಶೀದ್ ಇದ್ದರು.