ಮಡಿಕೇರಿ, ಅ. 25: ನೂತನ ಜಿ.ಪಂ. ಆಡಳಿತ ಭವನ ಲೋಕಾರ್ಪಣೆಯೊಂದಿಗೆ; 2018ರ ಪ್ರಾಕೃತಿಕ ಹಾನಿಯಿಂದ ಮನೆಗಳನ್ನು ಕಳೆದುಕೊಂಡಿರುವ ಕರ್ಣಂಗೇರಿ ಸುತ್ತಮುತ್ತಲಿನ 35 ಕುಟುಂಬಗಳಿಗೆ ಪುನರ್ವಸತಿ ಮನೆಗಳ ಹಸ್ತಾಂತರಗೊಳಿಸಲು ಆಗಮಿಸಿದ್ದ ಸಚಿವದ್ವಯರಾದ ಕೆ.ಎಸ್. ಈಶ್ವರಪ್ಪ ಹಾಗೂ ವಿ. ಸೋಮಣ್ಣ ಬಳಿ ಜಿ.ಪಂ. ಅಧ್ಯಕ್ಷರು, ಜಿಲ್ಲೆಯ ಶಾಸಕರು, ಸಂಘ ಸಂಸ್ಥೆಗಳ ಪ್ರಮುಖರು ಹತ್ತಾರು ಬೇಡಿಕೆ ಮಂಡಿಸಿದರು.ಕೊಡಗಿನಲ್ಲಿ ಗ್ರಾಮಸ್ವರಾಜ್ಯದಿಂದ ರಾಮರಾಜ್ಯ ವೆಂಬಂತೆ ಮಹಾತ್ಮ ಗಾಂಧೀಜಿ ಕನಸಿನ ಆಶಯಹೊತ್ತು ಸ್ವಚ್ಛ ಭಾರತ ಅಭಿಯಾನಕ್ಕೆ ರೂ. ಒಂದು ನೂರು ಕೋಟಿ ಅನುದಾನ, ಕೆರೆಗಳ ಅಭಿವೃದ್ಧಿಗೆ ರೂ. 50 ಕೋಟಿ, ರಸ್ತೆ ಅಭಿವೃದ್ಧಿಗೆ ರೂ. 50 ಕೋಟಿ ಗ್ರಾಮೀಣ ಭಾಗಕ್ಕೆ ಕಲ್ಪಿಸಿಕೊಡಿ ಎಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಗಮನ ಸೆಳೆದರು. ಒಟ್ಟು ರೂ. 200 ಕೋಟಿ ಬೇಡಿಕೆ ಸಲ್ಲಿಸಿದ ಜಿ.ಪಂ. ಅಧ್ಯಕ್ಷರು ಬುದ್ಧಿವಂತರೆಂದು ಸಚಿವ ಈಶ್ವರಪ್ಪ ನಗು ಬೀರಿದರು.
* ಬಸ್ ಒದಗಿಸಿ: ಜಿ.ಪಂ. ಭವನ ಬಹುದಿನಗಳ ಕನಸಾಗಿತ್ತು ಅದು ಈಡೇರಿದೆ. ಜನಸಾಮಾನ್ಯರಿಗೆ ಗ್ರಾಮೀಣ ಭಾಗದಿಂದ ಬಂದು ಹೋಗಲು ಮಿನಿ ಬಸ್ಗಳನ್ನು ಒದಗಿಸಲು ಪ್ರಸ್ತಾವನೆ ಸಲ್ಲಿಸಿದ್ದೇನೆ. ಕನಿಷ್ಟ 15 ಬಸ್ ಒದಗಿಸಿ; ಈಗ ಮೂರು ಮಿನಿ ಬಸ್ಗಳಿವೆ. ಅಂತೆಯೇ ಸ್ಥಳೀಯ ಸಂಸ್ಥೆಗಳಿಗೆ ಸರಕಾರದಿಂದ ಹೆಚ್ಚಿನ ಅನುದಾನ ನೀಡಿ. ಇಲ್ಲದಿದ್ದರೆ ಜನಪ್ರತಿನಿಧಿಗಳು ಜನತೆ ನಡುವೆ ತಿರುಗಾಡಲು ಆಗುವದಿಲ್ಲ.
* ನೂತನ ಭವನಕ್ಕಾಗಿ ಹತ್ತಾರು ಅಮಾಯಕ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿದೆ. ಅಂತಹವರಿಗೆ ಪುನರ್ವಸತಿ ಕಲ್ಪಿಸಬೇಕು. ಕೆ. ನಿಡುಗಣೆ ಗ್ರಾ.ಪಂ. ಈ ಬಗ್ಗೆ ಗಮನ ಸೆಳೆದಿದೆ. ಇಂತಹ ಅಮಾನವೀಯ ಕೃತ್ಯ ಮರುಕಳಿಸಬಾರದು.
*ಕೊಡಗಿನಲ್ಲಿ ಸರಕಾರಿ ಜಮೀನು ಮಾಲೀಕರು ಕಂದಾಯ ಇಲಾಖೆಯೇ ಅಥವಾ ಅರಣ್ಯ ಇಲಾಖೆಯೋ ಎಂಬ ಅನುಮಾನವಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಗಮನ ಸೆಳೆದರು.
ಸಭೆ ಕರೆಯಿರಿ
*ನೂತನ ಜಿ.ಪಂ. ಆಡಳಿತ ಭವನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಶಿಲಾನ್ಯಾಸಗೊಂಡು ಹಣ ಕಲ್ಪಿಸಿದ್ದಾಗಿದೆ; ಈಗ ಬಿಜೆಪಿ ಸರಕಾರದಿಂದ ಉದ್ಘಾಟನೆಗೊಂಡಿದೆಯಷ್ಟೆ. ಚುನಾವಣೆ ಬಂದಾಗ ರಾಜಕೀಯವಿರಲಿ; ಕೊಡಗಿನ ಅಭಿವೃದ್ಧಿಗೆ ನಾವೆಲ್ಲ ಒಗ್ಗೂಡಿ ಶ್ರಮಿಸುತ್ತೇವೆ. ಕೊಡಗು ಅಭಿವೃದ್ಧಿ ಪ್ರಾಧಿಕಾರದ ಸಭೆ ಕರೆದು ಸಮಸ್ಯೆಗೆ ಸ್ಪಂದಿಸಿ.
* ಕೊಡಗಿಗೆ 2018ರ ಸಾಲಿನಂತೆ ಸಂತ್ರಸ್ತರ ಮನೆಗಳಿಗೆ ತಲಾ ರೂ. 9.85 ಲಕ್ಷ ಕಲ್ಪಿಸಿಕೊಡಬೇಕು.
(ಮೊದಲ ಪುಟದಿಂದ) ರೂ. 5 ಲಕ್ಷದಲ್ಲಿ ಸುಸಜ್ಜಿತ ಮನೆ ಸಾಧ್ಯವಾಗದು ಎಂದು ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಗಮನ ಸೆಳೆದರು.
ಅನುದಾನ ನೀಡಿ : ಕೊಡಗು ಕಾವೇರಿ ನೀರುಣಿಸುತ್ತಿದೆ; ಇಲ್ಲಿನ ಜನತೆ ಕಳೆದೆರಡು ವರ್ಷಗಳ ಮಳೆಯ ಹೊಡೆತದಿಂದ ಸಂತ್ರಸ್ತರಾಗಿ ದ್ದಾರೆ. ಇವರಿಗೆ ಆಸರೆಯ ಒಳ್ಳೆಯ ಮನೆಗಾಗಿ ರೂ. 5 ಲಕ್ಷ ಬದಲಿಗೆ ಹಿಂದಿನ ಅವಧಿಯಂತೆ ತಲಾ ರೂ. 10 ಲಕ್ಷದ ಪುನರ್ವಸತಿಗಾಗಿ ಹೆಚ್ಚಿನ ಅನುದಾನ ನೀಡಿ; ಎಲ್ಲಾ ಗ್ರಾ.ಪಂ.ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಲ್ಪಿಸಿ; ರೈತರ ವಿದ್ಯುತ್ ಪಂಪ್ಸೆಟ್ ಬಿಲ್ ಮನ್ನಾ ಮಾಡಿ; ಹಳೆಯ ಕೋಟೆ ಅರಮನೆ ಕಚೇರಿ ನೂತನ ಕಟ್ಟಡಕ್ಕೆ ಸ್ಥಳಾಂತರ ಗೊಂಡಿದೆ. ಈ ಅರಮನೆಯನ್ನು ರೂ. 1 ಕೋಟಿ ಅನುದಾನದಿಂದ ಹಿಂದಿನ ವೈಭವದಂತೆ ನವೀಕರಿಸಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಆಗ್ರಹಿಸಿದರು.
ಒಳ್ಳೆಯ ಕೆಲಸ ಮಾಡೋಣ : ತುಲಾ ಸಂಕ್ರಮಣ ಕಾವೇರಿಗೆ ಜಾತ್ರೆಗೆ ಬೆಂಗಳೂರು ಮಹಾನಗರ ಪಾಲಿಕೆಯಿಂದ ರೂ. 1 ಕೋಟಿಯನ್ನು ಸಚಿವ ವಿ. ಸೋಮಣ್ಣ ಕೊಡಿಸಿದ್ದಾರೆ; ಮೇಲ್ಮನೆಯಲ್ಲಿ ನಾನು ಮತ್ತು ವೀಣಾ ಅಚ್ಚಯ್ಯ ಮಾತನಾಡುತ್ತಿದ್ದ ಎಲ್ಲಾ ವೇಳೆ ಕೊಡಗಿನ ಬಗ್ಗೆ ವಿಶೇಷ ಕಾಳಜಿಯೊಂದಿಗೆ ಸಚಿವ ಕೆ.ಎಸ್. ಈಶ್ವರಪ್ಪ ಪ್ರೋತ್ಸಾಹ ನೀಡಿದ್ದಾರೆ. ಇವರುಗಳ ಬೆಂಬಲದಿಂದ ಕೊಡಗಿಗೆ ಇನ್ನಷ್ಟು ಒಳ್ಳೆಯ ಕೆಲಸ ಮಾಡೋಣ ಎಂದು ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಆಶಿಸಿದರು.
ಇಂದಿನ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕ ಪ್ರತಿನಿಧಿಗಳು, ಮತ್ತಿತರರು ಹಲವು ಬೇಡಿಕೆಗಳನ್ನು ಸಚಿವರುಗಳಿಗೆ ಮುಂದಿಟ್ಟರು. ಮಳೆಗಾಲದ ಬಳಿಕ ಸಮಗ್ರವಾಗಿ ಪರಿಶೀಲಿಸಿ ಪರಿಹಾರ ಕಲ್ಪಿಸುವದಾಗಿ ಸಚಿವದ್ವಯರು ಭರವಸೆ ನೀಡಿದರು. ಕಾರ್ಯಕ್ರಮ ನಿಮಿತ್ತ ವಿಶೇಷ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.