ನಾಪೆÉÇೀಕ್ಲು, ಅ. 25: ಮದುವೆ ಮತ್ತಿತರ ಸಮಾರಂಭಗಳಲ್ಲಿ ರಕ್ಷಣಾ ಮದ್ಯವನ್ನು ಬಳಸಬಾರದು ಎಂದು ಅಬಕಾರಿ ಇಲಾಖೆ ಹೊರಡಿಸಿದ ಸುತ್ತೋಲೆಯನ್ನು ಕೂಡಲೇ ಹಿಂಪಡೆಯದಿದ್ದರೆ, ಜಿಲ್ಲಾ ಜಯ ಕರ್ನಾಟಕ ಸಂಘಟನೆ, ಜಿಲ್ಲಾ ಮಾಜಿ ಸೈನಿಕರ ಸಂಘ, ವಿವಿಧ ಸಂಘಟನೆಗಳು ಮತ್ತು ಸಮಾಜಗಳ ಸಹಕಾರದೊಂದಿಗೆ ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವದು ಎಂದು ಜಯ ಕರ್ನಾಟಕ ಸಂಘಟನೆಯ ಮಡಿಕೇರಿ ತಾಲೂಕು ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೇಯಂಡ ಸಾಬ ತಿಮ್ಮಯ್ಯ ಮತ್ತಿತರರು ಎಚ್ಚರಿಸಿದ್ದಾರೆ. ಪಟ್ಟಣದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊಡಗಿನಲ್ಲಿ ಮದುವೆ, ನಾಮಕರಣ, ತಿಥಿ ಸೇರಿದಂತೆ ಸಮಾರಂಭಗಳಲ್ಲಿ ಮದ್ಯ ಬಳಸುವದು ವಾಡಿಕೆಯಾಗಿದೆ. ಸ್ಥಿತಿವಂತರು ದುಬಾರಿ ಬೆಲೆಯ ಮದ್ಯ ಬಳಸುತ್ತಾರೆ. ಬಡವರು ತಮ್ಮ ಸಂಬಂಧದ, ಪರಿಚಯದ ಮಾಜಿ ಸೈನಿಕರಿಗೆ ಮನವಿ ಮಾಡಿ ಅಲ್ಪ ಸ್ವಲ್ಪ ಮದ್ಯ ಬಳಸುತ್ತಾರೆ. ಅದರಂತೆ ಮಾಜಿ ಸೈನಿಕರಿಗೆ ಅವರ ನಿವೃತ್ತಿ ನಂತರ ಕಡಿಮೆ ದರದಲ್ಲಿ ಕೇಂದ್ರ ಸರಕಾರ ಮದ್ಯ ವಿತರಿಸುತ್ತಿದೆ. ಇದನ್ನು ಅವರು ತಮ್ಮ ಮನೆಯಲ್ಲಿ ನಡೆಯುವ ಸಮಾರಂಭಗಳಿಗೆ ಕಾಯ್ದಿಟ್ಟಿರುತ್ತಾರೆ. ಇದರ ಬಗ್ಗೆ ಅಬಕಾರಿ ಇಲಾಖೆ ಇದಕ್ಕೆ ಅಡ್ಡಿ ಮಾಡುವದು ಸರಿಯಿಲ್ಲ ಎಂದರು.
ಗೋಷ್ಠಿಯಲ್ಲಿ ಜಯಕರ್ನಾಟಕ ಸಂಘಟನೆಯ ನಿಡುಮಂಡ ಕೃತಿ, ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಇದ್ದರು.