ಮಡಿಕೇರಿ, ಅ. 25: ಮಡಿಕೇರಿ ಸಮೀಪದ ಬಿಳಿಗೇರಿ ಗ್ರಾಮದಲ್ಲಿ ರೈತರ ಬಾಳೆ ತೋಟದಲ್ಲಿ ಹೊಸ ಮಾದರಿಯ ಹುಳುವೊಂದು ಕಾಣಿಸಿಕೊಂಡಿದ್ದು, ಇವುಗಳ ಸಂತತಿ ಬಾಳೆ ಎಲೆಯನ್ನು ರಾತ್ರಿವೇಳೆ ಕತ್ತರಿಸಿ ತಿಂದು ನಷ್ಟವುಂಟುಮಾಡುತ್ತಿವೆ. ಮೇಲ್ನೋಟಕ್ಕೆ ರೇಶ್ಮೆ ಹುಳುವನ್ನು ಹೋಲುವ ರೀತಿಯಲ್ಲಿ ಕಾಣಿಸುವ ಈ ಹುಳಗಳು ಬಾಳೆ ಎಲೆಯಲ್ಲೇ ಗೂಡುಕಟ್ಟಿ ವಾಸವಿದ್ದು, ಮೊಟ್ಟೆ ಇಕ್ಕಿ ಸಂತಾನಾಭಿವೃದ್ಧಿಪಡಿಸುತ್ತವೆ ಎಂದು ಹೇಳುವ ಗ್ರಾಮದ ರೈತ ಕಾಕೇರ ಸೋಮಣ್ಣ, ಈ ಹುಳು ಎಂಟರಿಂದ ಹತ್ತು ದಿನಗಳ ಕಾಲ ಮಾತ್ರ ಬದುಕಿದ್ದು, ಈ ಅವಧಿಯಲ್ಲಿ ಅನೇಕ ಮರಿಗಳಿಗೆ ಜನ್ಮ ನೀಡುವದರಿಂದ ರೈತರಿಗೆ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ಈ ಹುಳಗಳ ನಾಶಕ್ಕೆ ಕ್ರಮಕೈಗೊಳ್ಳುವಂತೆ ಸೋಮಣ್ಣ ಕೋರಿಕೊಂಡಿದ್ದಾರೆ.