ಸೋಮವಾರಪೇಟೆ, ಅ. 25: ಬೆಂಗಳೂರಿನಿಂದ ಕೊಡಗಿನ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರ ಕಾರೊಂದು ಸಮೀಪದ ಯಡವನಾಡು-ಕಾರೇಕೊಪ್ಪ ಅರಣ್ಯದ ರಾಜ್ಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಮೋರಿಯೊಳಗೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿನ್ನೆ ಬೆಳಿಗ್ಗೆ ಬೆಂಗಳೂರಿನಿಂದ ಹೊರಟು ಮಡಿಕೇರಿಯ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಿದ ನಂತರ, ಸೋಮವಾರಪೇಟೆಯ ಮಲ್ಲಳ್ಳಿ ಜಲಪಾತಕ್ಕೆ ತೆರಳಿ, ವಾಪಸ್ ಕುಶಾಲನಗರ ಮಾರ್ಗದ ಮೂಲಕ ಮೈಸೂರಿಗೆ ತೆರಳುವ ಸಂದರ್ಭ ನಿನ್ನೆ ಸಂಜೆ ಕಾರೇಕೊಪ್ಪದಿಂದ 3 ಕಿ.ಮೀ. ದೂರದಲ್ಲಿ ಘಟನೆ ಸಂಭವಿಸಿದೆ.

ಅರಣ್ಯದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ನೆಕ್ಸನ್ ಕಾರು, ರಸ್ತೆ ಬದಿಯ ದಿಬ್ಬಕ್ಕೆ ಢಿಕ್ಕಿಯಾಗಿ, ಪಕ್ಕದಲ್ಲೇ ಇದ್ದ ಮೋರಿಯೊಳಗೆ ಬಿದ್ದಿದೆ. ಕಾರಿನ ಏರ್‍ಬ್ಯಾಗ್‍ಗಳು ಹೊರಬಂದಿದ್ದರಿಂದ ಐದು ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಕಾರಿಗೆ ಭಾಗಶಃ ಹಾನಿಯಾಗಿದೆ.

ಬೆಂಗಳೂರಿನಲ್ಲಿ ಖಾಸಗಿ ಚಾಲನೆಗೆ ಸಿಗುವ ಓಲರ್ ಕಾರ್ಸ್‍ನಿಂದ ಪ್ರಯಾಣಿಕರು ಕಾರನ್ನು ಬಾಡಿಗೆಗೆ ಪಡೆದಿದ್ದು, ಇಂದು ಬೆಳಿಗ್ಗೆ ‘ಟ್ರ್ಯಾಕ್ಟರ್ ಕ್ರೇನ್’ ಸಹಾಯದಿಂದ ಕಾರನ್ನು ಮೋರಿಯೊಳಗಿನಿಂದ ಮೇಲೆತ್ತಲಾಯಿತು.