ಸಿದ್ದಾಪುರ, ಡಿ. 25: ವಿದ್ಯುತ್ ಗ್ರಾಹಕರಿಗೆ ಅಧಿಕ ಮೊತ್ತದ ಬಿಲ್ ಬರುತ್ತಿದೆ ಎಂದು ಆರೋಪಿಸಿ ಚೆಸ್ಕಾಂ ಕಚೇರಿ ಎದುರು ಸಿಪಿಐಎಂ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸಿದ್ದಾಪುರ ಗ್ರಾಮ ಪಂಚಾಯಿತಿ ಭಾಗದಲ್ಲಿ ಅಧಿಕ ಮೊತ್ತದ ವಿದ್ಯುತ್ ಬಿಲ್ ನೀಡುತ್ತಿದ್ದು, ಇದರಿಂದಾಗಿ ವಿದ್ಯುತ್ ಬಳಕೆದಾರರಿಗೆ ಸಮಸ್ಯೆಯಾಗಿದೆ ಎಂದು ಹಾಗೂ ಚೆಸ್ಕಾಂ ಕಾರ್ಯವೈಖರಿಯನ್ನು ಖಂಡಿಸಿದ ಸಿದ್ದಾಪುರದ ಕಚೇರಿಯೆದುರು ಸಿಪಿಐಎಂ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ರಮೇಶ್ ಹಾಗೂ ಕುಟ್ಟಪ್ಪ ಮಾತನಾಡಿ ಸಿದ್ದಾಪುರ ವ್ಯಾಪ್ತಿಯ ಗುಹ್ಯ ಕೂಡಗದ್ದೆ ಭಾಗದಲ್ಲಿ ಹಲವಾರು ಮಂದಿ ಬಡವರಿಗೆ ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳು ಸಮಸ್ಯೆಗೆ ಸಿಲುಕಿದ್ದಾರೆ ಎಂದರು. ಈಗಾಗಲೇ ಪ್ರವಾಹದಿಂದ ತತ್ತರಿಸಿರುವ ಗ್ರಾಮಸ್ಥರು ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿ ಇರುವ ಸಂದರ್ಭದಲ್ಲಿ ಇದೀಗ ಭಾರೀ ಮೊತ್ತದ ವಿದ್ಯುತ್ ಬಿಲ್‍ಗಳು ಬರುತ್ತಿದ್ದು, ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ತಿಳಿಸಿದರು. ಕೂಡಲೇ ಈ ಬಗ್ಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಪಕ್ಷದ ವತಿಯಿಂದ ವೀರಾಜಪೇಟೆ ತಾಲೂಕಿನ ಮುಖ್ಯ ಅಭಿಯಂತರ ಸುರೇಶ್ ಅವರಿಗೆ ಮನವಿ ಪತ್ರವನ್ನು ನೀಡಲಾಯಿತು. ಮನವಿ ಪತ್ರ ಸ್ವೀಕರಿಸಿದ ಸುರೇಶ್ ಅವರು ಮಾತನಾಡಿ ದೊಡ್ಡ ಮೊತ್ತದ ವಿದ್ಯುತ್ ಬಿಲ್ ಬಗ್ಗೆ ಪರಿಶೀಲನೆ ನಡೆಸುವದಾಗಿ ತಿಳಿಸಿದರು. ಈಗಾಗಲೇ ಹಿಂದೆ ವಿದ್ಯುತ್ ಬಿಲ್ ನೀಡುತ್ತಿದ್ದ ಮಾಪಕನನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದರು. ಅಧಿಕ ಬಿಲ್ ಬರುತ್ತಿರುವ ಹಿನ್ನೆಲೆಯಲ್ಲಿ ಚೆಸ್ಕಾಂ ಕಚೇರಿಯ ಸಿಬ್ಬಂದಿಯನ್ನು ಎಲ್ಲ ಮನೆಗಳಿಗೆ ಕಳಿಸಿ ಬಿಲ್ ಹಾಗೂ ರೀಡಿಂಗ್ ಅನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗುವದೆಂದು ತಿಳಿಸಿದರು. ಈ ಬಗ್ಗೆ ಪರಿಷ್ಕರಿಸಲಾಗುವದು; ಅಲ್ಲಿಯವರೆಗೆ ಗ್ರಾಹಕರು ತಮ್ಮ ಕನಿಷ್ಟ ಬಿಲ್ ಮೊತ್ತವನ್ನು ಪಾವತಿಸುವಂತೆ ತಿಳಿಸಿದರು. ಅಧಿಕ ಮೊತ್ತದ ಬಿಲ್ಲಿನ ಬಗ್ಗೆ ಪರಿಷ್ಕರಿಸಿ ನಂತರ ಪತ್ರ ಕಳುಹಿಸಲಾಗುವದು. ದೊಡ್ಡ ಮೊತ್ತ ಇದ್ದಲ್ಲಿ ಅದನ್ನು ಒಮ್ಮೆಲೇ ಪಾವತಿಸಲು ಸಾಧ್ಯವಾಗದಿದ್ದಲ್ಲಿ ಹಂತ ಹಂತವಾಗಿ ಹಣವನ್ನು ಪಾವತಿಸಬೇಕು ಎಂದು ತಿಳಿಸಿದರು.

ಕೆಲವು ಸಿಬ್ಬಂದಿಗಳು ಹಣ ಪಡೆದುಕೊಂಡು ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಯಾರೂ ಕೂಡ ಮಾಪಕ, ಲೈನ್ ಮೆನ್‍ಗಳ ಬಳಿ ಹಣ ನೀಡದಂತೆ ತಿಳಿಸಿದರು. ಕಚೇರಿಯಲ್ಲಿ ಎರಡು ದಿನ ವಿದ್ಯುತ್ ಬಿಲ್ ಪಾವತಿಸಲು ಅವಕಾಶವಿದ್ದು, ಗ್ರಾಹಕರ ಮೊಬೈಲ್ ಮುಖಾಂತರ ಕೂಡ ಹಣ ಪಾವತಿಸಲು ಸಾಧ್ಯವಿದೆ ಎಂದು ಸುರೇಶ್ ಮಾಹಿತಿ ನೀಡಿದರು. ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಪದಾಧಿಕಾರಿಗಳಾದ ಅನಿಲ್, ಮೈದು, ಇನ್ನಿತರರು ಹಾಜರಿದ್ದರು.