ವೀರಾಜಪೇಟೆ, ಅ. 24: ಪಂದ್ಯಾಟಗಳಲ್ಲಿ ಮ್ಯೆದಾನದÀ ಶಿಸ್ತು ಮುಖ್ಯ. ಆಟದಲ್ಲಿ ಶಿಸ್ತು ಅಳವಡಿಸಿಕೊಳ್ಳದವರು ಉತ್ತಮ ಪ್ರತಿಭೆಯಾಗಿಹೊರ ಹೊಮ್ಮಲು ಅಸಾಧ್ಯ. ಪಂದ್ಯಾಟದಲ್ಲಿ ಪ್ರಾಮಾಣಿಕತೆ ದಕ್ಷತೆಯನ್ನು ಆಟಗಾರರು ಅಳವಡಿಸಿಕೊಳ್ಳಬೇಕು ಎಂದು ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಹೇಳಿದರು. 2020ರ ಮೇ ತಿಂಗಳಲ್ಲಿ ವೀರಾಜಪೇಟೆ ಜೂನಿಯರ್ ಕಾಲೇಜು ಮ್ಯೆದಾನದಲ್ಲಿ ಕೊಡವ ಕುಟುಂಬಗಳ ನಡುವೆ ನಡೆಸಲು ಉದ್ದೇಶಿಸಿರುವ ಪೊರ್ಕೋಂಡ ಕಪ್ ಕ್ರಿಕೆಟ್ ಪಂದ್ಯಾಟದ ಲಾಂಛನವನ್ನು ಚಂಬೆಬೆಳ್ಳೂರು ಗ್ರಾಮದ ತೆಕ್ಕಮಕ್ಕಿಯಲ್ಲಿರುವ ಓ ಫಾರಂ ರೆಸಾರ್ಟ್‍ನಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು ಕಳೆದ 20 ವರ್ಷಗಳಿಂದ ಕೊಡವ ಕ್ರಿಕೆಟ್ ಅಕಾಡೆಮಿ ಮೂಲಕ ಪಂದ್ಯಾಟವನ್ನು ನಡೆಸಲಾಗುತ್ತಿದೆ ಎಂದರು.
(ಮೊದಲ ಪುಟದಿಂದ) ಕದನೂರು ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೋಂಡ ಶಶಿ ಸುಬ್ರಮಣಿ ಮಾತನಾಡಿ ಪ್ರಪಂಚದಲ್ಲಿ ಜನರು ಕ್ರಿಕೇಟ್‍ಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೆ ಕೊಡಗಿನಲ್ಲಿ ಹಾಕಿ ಹೆಸರುವಾಸಿಯಾಗಿದೆ. ಕೇವಲ 90 ಸದಸ್ಯರಿರುವ ಸಣ್ಣ ಕುಟುಂಬ ಇಂತಹ ಪಂದ್ಯಾಟವನ್ನು ಆಯೋಜಿಸುತ್ತಿರುವದು ಅಭಿನಂದನಾರ್ಹ. ಚಂಬೆಬೆಳ್ಳೂರು ಗ್ರಾಮದ ಮಂಡೇಪಂಡ ಕುಟುಂಬ ಹಾಕಿ ಪಂದ್ಯಾಟವನ್ನು ನಡೆಸಿದೆ. ಈಗ ಚಂಬೆಬೆಳ್ಳೂರಿನ ಪೋರ್ಕೊಂಡ ಕುಟುಂಬ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುತ್ತಿದೆ. ಪ್ರತಿಯೊಬ್ಬ ಆಟಗಾರರಲ್ಲಿ ಶಿಸ್ತು ಬಹಳ ಮುಖ್ಯ, ಅದೇ ರೀತಿ ಕುಟುಂಬದಲ್ಲಿಯೂ ಹೊಂದಾಣಿಕೆ ಅಗತ್ಯ ಎಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಮಾತನಾಡಿ ಮಕ್ಕಳು ಕ್ರೀಡೆಗೆ ಹೆಚ್ಚು ಒತ್ತು ನೀಡುವದರ ಜೊತೆಗೆ ವಿದ್ಯಾಭ್ಯಾಸದ ಕಡೆಗೂ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಹೇಳಿದರು.
ಅತಿಥಿಯಾಗಿ ಭಾಗವಹಿಸಿದ್ದ ಇಲ್ಲಿನ ಜೂನಿಯರ್ ಕಾಲೇಜಿನ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್ ಮಾತನಾಡಿ ಇಂತಹ ಪಂದ್ಯಾಟಗಳಿಂದ ಗ್ರಾಮಾಂತರ ಪ್ರದೇಶದ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ ದೊರೆಯಲಿದೆ. ಸಂಘಟನೆಗಳು, ಕುಟುಂಬಗಳು ಗ್ರಾಮಾಂತರದಲ್ಲಿಯೂ ಪಂದ್ಯಾಟಗಳನ್ನು ಆಯೋಜಿಸುವದು ಉತ್ತಮ ಕೆಲಸವಾಗಿದೆ ಎಂದು ಹೇಳಿದರು.
ಮಡಿಕೇರಿ ತಾಲೂಕು ಆರ್.ಎಂ.ಸಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಮಾತನಾಡಿ ಕುಟುಂಬಗಳು ಪಂದ್ಯಾಟವನ್ನು ಆಯೋಜಿಸುವದರಿಂದ ಕುಟುಂಬಗಳ ನಡುವಿನ ಪರಸ್ಪರ ಬಾಂಧವ್ಯ ಇನ್ನೂ ಹೆಚ್ಚಾಗಲಿದೆ. ಅವರ ಮಕ್ಕಳಿಗೂ ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶ ದೊರೆತಂತಾಗುತ್ತದೆ ಎಂದು ಹೇಳಿದರು. ಪೊರ್ಕೋಂಡ ಕುಟುಂ¨ದ ಪಟ್ಟೆದಾರ ನಾಚಪ್ಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಚಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಟೇರಿರ ಪ್ರೇಮ್ ನಾಣಯ್ಯ, ಸದಸ್ಯೆ ಟೀನಾ ರನ್ನಾ, ಕೊಡವ ಕ್ರಿಕೆಟ್ ಅಕಾಡೆÀಮಿ ಕಾರ್ಯದರ್ಶಿ ಕುಂಡ್ರಂಡ ಬೋಪಣ್ಣ, ನಿರ್ದೇಶಕ ತಾತಂಡ ಪ್ರತಾಪ್, ಪಟ್ಟಡ ಪ್ರಕಾಶ್, ಪಂದ್ಯಾಟದ ಅಧ್ಯಕ್ಷ ಪೊರ್ಕೋಂಡ ಬೋಪಣ್ಣ, ತಾಂತ್ರಿಕ ನಿರ್ದೇಶಕ ಸುನಿಲ್ ಉಪಸ್ಥಿತರಿದ್ದರು.