ಕುಶಾಲನಗರ, ಅ. 24: ಕುಶಾಲನಗರದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಗುಂಪುಗಳ ನಡುವೆ ವಾಗ್ವಾದ ಏರ್ಪಟ್ಟು ಕೈಕೈ ಮಿಲಾಯಿಸುವ ಹಂತಕ್ಕೆ ತಲಪಿದ ಘಟನೆ ಗುರುವಾರ ಸಂಜೆ ನಡೆಯಿತು.

ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾದ ವೆಂಕಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಕನ್ನಿಕಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೆಬ್ಬಾಲೆ ವ್ಯಾಪ್ತಿಯ ಕಾಂಗ್ರೆಸಿಗರೊಬ್ಬರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ಒತ್ತಾಯಿಸಿದರು. ಇವರು ಕಾಂಗ್ರೆಸ್ ಸಭೆಗೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಕರೆತಂದು ಸಭೆಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಶಶಿಧರ್ ಬೆಂಬಲಿಗರು ಸಭೆಯಲ್ಲಿ ಆರೋಪ ವ್ಯಕ್ತಪಡಿಸಿದ ಬೆನ್ನಲ್ಲೇ ಎರಡು ಗುಂಪುಗಳ ನಡುವೆ ತೀವ್ರ ಜಟಾಪಟಿ ನಡೆದಿದೆ. ತಳ್ಳಾಟ ನೂಕಾಟ ಏರ್ಪಟ್ಟು ಸಭೆಯಲ್ಲಿ ಗೊಂದಲ ಉಂಟಾಗಿದೆ.

ಘಟನೆಯಿಂದ ಬೇಸತ್ತ ಬ್ಲಾಕ್ ಕಾಂಗ್ರೆಸ್ ಹಾಲಿ ಅಧ್ಯಕ್ಷ ವಿ.ಪಿ.ಶಶಿಧರ್ ಅವರು ಅಧ್ಯಕ್ಷ ಸ್ಥಾನ ತ್ಯಜಿಸುವ ಹೇಳಿಕೆ ನೀಡಿ ಸಭೆಯಿಂದ ನಿರ್ಗಮಿಸಿದರು.

ಇವರೊಂದಿಗೆ ಬೆಂಬಲಿಗರೂ ಕೂಡ ಸಭೆಯನ್ನು ಬಹಿಷ್ಕರಿಸಿ ಹೊರನಡೆದ ಕಾರಣ ಸಭೆ ಮೊಟಕುಗೊಂಡಿದೆ. ಘಟನೆ ಕುರಿತು ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಶಶಿಧರ್ ಅವರ ರಾಜೀನಾಮೆಯನ್ನು ನಾವು ಅಂಗೀಕರಿಸುವದಿಲ್ಲ. ವಿ.ಪಿ.ಶಶಿಧರ್ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೇ ಉಳಿಯಲಿದ್ದಾರೆ. ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಪಕ್ಷದ ಆಂತರಿಕ ಗೊಂದಲವನ್ನು ಇತ್ಯರ್ಥ ಪಡಿಸುವದಾಗಿ ತಿಳಿಸಿದರು.