ಕಣಿವೆ, ಅ. 24: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಮ್ಮನಕೊಲ್ಲಿ ಕೃಷ್ಣಪ್ಪ ಬಡಾವಣೆಯಲ್ಲಿನ ನಿವಾಸಿಗಳು ಸೂಕ್ತ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ. ಕಳೆದ ಹದಿನೈದು ವರ್ಷಗಳ ಹಿಂದೆ ನಿರ್ಮಿತ ಈ ಬಡಾವಣೆಯಲ್ಲಿ ಬಹಳಷ್ಟು ಮಂದಿ ನಿವೇಶನಗಳನ್ನು ಖರೀದಿಸಿ ಮನೆಗಳನ್ನು ಕಟ್ಟಿ ಕೊಂಡು ವಾಸವಿದ್ದಾರೆ. ಆದರೆ ಮುಖ್ಯ ರಸ್ತೆಯಿಂದ ಸೂಕ್ತ ರಸ್ತೆಯೇ ಇಲ್ಲದೇ ಪರದಾಡುವ ಸ್ಥಿತಿ ನಿತ್ಯ ನೂತನ ವಾಗಿದೆ. ಈ ಬಡಾವಣೆಯಿಂದ ಕಳೆದ ಬಾರಿ ಮುಳ್ಳುಸೋಗೆ ಪಂಚಾಯಿತಿಗೆ ಖಾದರ್, ವಿಶ್ವ ಹಾಗೂ ಗಣೇಶ ಎಂಬ ಮೂವರು ಚುನಾಯಿತರಾಗಿದ್ದಾರೆ. ಆದರೆ ಈ ಮೂವರು ಯಾರೂ ಕೂಡ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಸೌಜನ್ಯವನ್ನೇ ತೋರುತ್ತಿಲ್ಲ.
ಸಮಸ್ಯೆಗಳನ್ನು ನಿವಾರಿಸುವದಿರಲಿ ಸಮಸ್ಯೆಯ ಸ್ವರೂಪಗಳನ್ನೇ ಅರಿಯುವ ಮನಸ್ಸು ಮಾಡುತ್ತಿಲ್ಲ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಳಿ ಹೋಗಿ ಲಿಖಿತವಾಗಿಯೇ ದೂರು ನೀಡಿ ಹಾಲೀ ಇರುವ ಮಣ್ಣು ರಸ್ತೆಯನ್ನು ಸರಿಪಡಿಸಿಕೊಡಿ. ರಸ್ತೆಯ ಎರಡೂ ಬದಿ ಮಣ್ಣು ತೆಗೆದು ಮಳೆ ನೀರು ಮತ್ತು ಮನೆಗಳ ತ್ಯಾಜ್ಯ ನೀರು ಚರಂಡಿಯಲ್ಲಿ ಹರಿವಂತೆ ಮಾಡಿಕೊಡಿ ಎಂದು ಮನವಿ ಮಾಡಿದರೂ ಕೂಡ ಏನೂ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳಾದ ಬಿಳಿಮೊಗ್ಗ ವೇಣು, ಜಿ.ಕೆ. ಕುಮಾರ್, ಆನಂದ್ ಮೊದಲಾದವರು ಮಾಧ್ಯಮದವರ ಬಳಿ ದೂರಿದ್ದಾರೆ.
ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಳೆಯ ನೀರು ಚರಂಡಿಯಿಲ್ಲದ ಪರಿಣಾಮ ಕಿತ್ತುನಿಂತ ಮಣ್ಣಿನ ರಸ್ತೆಯ ನಡುವಲ್ಲೇ ಹರಿದು ದೊಡ್ಡ ದೊಡ್ಡ ಕೊರಕಲು ಉಂಟಾಗಿವೆ. ಕಾರುಗಳಿರಲೀ ಕಾಲುಗಳು ಕೂಡ ತೆರಳದಷ್ಟರಮಟ್ಟಿಗೆ ರಸ್ತೆ ಕುಲಗೆಟ್ಟು ಹೋಗಿದೆ. ಶಾಸಕರಿಗೂ ದೂರಿಯೂ ಪ್ರಯೋಜನವಾಗಿಲ್ಲ. ಇನ್ನು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರು ಕೂಡ ನಮ್ಮ ಗೋಳು ಕೇಳುತ್ತಿಲ್ಲ ಎಂದು ಈ ನಿವಾಸಿಗಳು ರೋದಿಸಿದ್ದಾರೆ. ಬಡಾವಣೆಯ ರಸ್ತೆಯಲ್ಲಿನ ನಿವಾಸಿಯೊಬ್ಬರು ನಾಲ್ಕು ಅಡಿಗಳಷ್ಟು ರಸ್ತೆಗೆ ತಡೆಗೋಡೆ ಕಟ್ಟಿ ಕೊಂಡಿದ್ದಾರೆ. ಇನ್ನೋರ್ವ ನಿವಾಸಿ ನೀರು ಹರಿಯಬೇಕಾದ ಚರಂಡಿಯೊಳಗೆ ಕಲ್ಲುಗಳನ್ನು ಹಾಕಿ ಮಳೆ ನೀರೆಲ್ಲಾ ರಸ್ತೆಯ ಮಧ್ಯೆ ಹರಿಯುತ್ತಿದೆ. ಆದರೂ ಕೂಡ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಲು ಮುಂದಾಗಿಲ್ಲ.
ಸ್ಥಳೀಯ ನಿವಾಸಿಗಳಿಗೆ ಅನುಕೂಲ ಒದಗಿಸದ ಪಂಚಾಯಿತಿ ಆಡಳಿತದ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಧರಣಿ ನಡೆಸಿ ಜಿಲ್ಲಾಧಿಕಾರಿಗಳನ್ನು ಬಡಾವಣೆಗೆ ಆಹ್ವಾನಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಯತ್ನವೊಂದು ಬಾಕಿ ಇದೆ ಎನ್ನುತ್ತಾರೆ ಬಿಳಿಮೊಗ್ಗ ವೇಣು. ನಾವು ಮನೆಯನ್ನು ಕಟ್ಟಿಕೊಂಡ ಮೇಲೆ ಕುಡಿಯುವ ನೀರಿನ ಸಂಪರ್ಕವನ್ನು ಕೂಡ ಪಂಚಾಯಿತಿ ಅಳವಡಿಸಿಲ್ಲ. ವಿದ್ಯುತ್ ಕಂಬಗಳನ್ನು ನಮ್ಮ ಸ್ವಂತ ಖರ್ಚಿನಿಂದಲೇ ನಾವುಗಳು ನಮ್ಮ ನಮ್ಮ ಮನೆಗಳ ಬಳಿ ಹಾಕಿಸಿ ಕೊಂಡಿದ್ದೇವೆ. ಕುಡಿಯುವ ನೀರು, ನಡೆಯುವ ದಾರಿಯನ್ನೂ ಕಲ್ಪಿಸದ ಪಂಚಾಯಿತಿ ಇದ್ದರೇನು? ಇಲ್ಲದಿದ್ದರೇನು? ಇದಕ್ಕೇನಾ ನಾವು ಮತ ಹಾಕಿ ಜನಪ್ರತಿನಿಧಿಗಳನ್ನು ನೇಮಕ ಮಾಡಿದ್ದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಇಲ್ಲಿನ ನಿವಾಸಿಗಳು.
ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್. ರಾಜಶೇಖರ್ ಅವರ ಬಳಿ ಪ್ರತಿಕ್ರಿಯೆ ಬಯಸಿದಾಗ ಕೃಷ್ಣಪ್ಪ ಬಡಾವಣೆ ಯಲ್ಲಿನ ರಸ್ತೆ ಹಾಗೂ ಚರಂಡಿ ಸಮಸ್ಯೆಯ ಅರಿವಿದೆ. ಅಲ್ಲಿ ರಸ್ತೆ ಮತ್ತು ಚರಂಡಿಯನ್ನು ಏಕ ಕಾಲದಲ್ಲಿ ಅಳವಡಿಸಲು ಹೆಚ್ವಿನ ಅನುದಾನದ ಅಗತ್ಯವಿದೆ. ಇದೀಗ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ನಾವು ಏನೂ ಮಾಡಲಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಪಂಚಾಯಿತಿ ವತಿಯಿಂದ ಮಳೆ ನಿಂತ ಕೂಡಲೇ ಕೊರಕಲು ಬಿದ್ದ ರಸ್ತೆಯನ್ನು ಸರಿಪಡಿಸಿ ಎರಡೂ ಕಡೆ ಮಣ್ಣು ತೆಗೆದು ಮಳೆ ನೀರು ಹರಿಯುವಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವದು ಎನ್ನುತ್ತಾರೆ. ಇನ್ನೊಂದು ವಿಚಾರ ಏನೆಂದರೆ ಸ್ಥಳೀಯ ನಿವಾಸಿಗಳು ಮತ್ತು ಅಲ್ಲಿನ ಚುನಾಯಿತರಲ್ಲಿ ಸಾಮರಸ್ಯದ ಕೊರತೆಯಿದ್ದು, ಸಮಸ್ಯೆಯನ್ನು ಸರಿಪಡಿಸಲು ನಿವಾಸಿಯೊಬ್ಬರು ಚುನಾಯಿತರನ್ನು ಏರು ಧ್ವನಿಯಲ್ಲಿ ಪ್ರಶ್ನಿಸಿದ್ದು ಪರಸ್ಪರರಲ್ಲಿ ಜಿದ್ದು ಮೂಡಿಸಿದೆ ಎನ್ನಲಾಗಿದೆ. ಈ ಇಬ್ಬರ ಮಧ್ಯೆ ಪಂಚಾಯಿತಿ ಪಿಡಿಓ ಅಸಹಾಯಕ ರಾಗಿದ್ದಾರೆ ಎನ್ನಲಾಗುತ್ತಿದೆ. ಸದಸ್ಯರು ಈ ರಸ್ತೆಯ ಅಭಿವೃದ್ಧಿಗೆ ಕ್ರಿಯಾ ಯೋಜನೆಯಲ್ಲಿ ಕಾಮಗಾರಿ ಸೇರಿಸಿಲ್ಲ. ಜನರ ಒತ್ತಾಯಕ್ಕೆ ಮಣಿದು ಪಿಡಿಓ ಕೂಡ ಏನೂ ಮಾಡುವಂತಿಲ್ಲ. ಒಟ್ಟಾರೆ ಮುಳ್ಳುಸೋಗೆ ಪಂಚಾಯಿತಿ ಸಮಸ್ಯೆ ಆ ದೇವರಿಗೆ ಪ್ರೀತಿ...!
-ಕೆ.ಎಸ್. ಮೂರ್ತಿ