ಶನಿವಾರಸಂತೆ, ಅ. 24: ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ಶ್ರೀ ವಿಘ್ನೇಶ್ವರ ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯಕ್ಕೆ ನೀತಿಕತೆ, ಕಾರ್ಟೂನ್ ಕತೆ, ಗಣಿತ, ವಿಜ್ಞಾನ, ಪ್ರಾಣಿ-ಪಕ್ಷಿ, ಪರಿಸರ ಜಾಗೃತಿಗೆ ಸಂಬಂಧಿಸಿದ ಪುಸ್ತಕಗಳನ್ನು ಕೊಡುಗೆ ನೀಡಿದರು.

ಈ ಸಂದರ್ಭ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್ ಮಾತನಾಡಿ, ಮೊಬೈಲ್ ಹಿಡಿವ ವಿದ್ಯಾರ್ಥಿಗಳ ಪುಟ್ಟ ಕೈಗಳಲ್ಲಿ ಪುಸ್ತಕ ಹಿಡಿಸಬೇಕು. ಅವರಲ್ಲಿ ಓದುವ ಅಭಿರುಚಿ ಮೂಡಿಸುವ ಉದ್ದೇಶದಿಂದ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆ ನೀಡಲಾಗಿದೆ. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಕೆ. ಸುಬ್ರಮಣ್ಯ ಹಾಗೂ ಉಪಾಧ್ಯಕ್ಷ ಕೃಷ್ಣರಾಜ್ ಮಾತನಾಡಿ, ಜ್ಞಾನಾರ್ಜನೆಯಲ್ಲಿ ಗ್ರಂಥಾಲಯಗಳ ಪಾತ್ರ ಬಹು ಮುಖ್ಯ. ವಿದ್ಯಾರ್ಥಿಗಳು ಪಠ್ಯೇತರ ಪುಸ್ತಕಗಳ ಬಗ್ಗೆ ಆಸಕ್ತಿ ತೋರಿಸಿ ಬೌದ್ದಿಕಮಟ್ಟ ಸುಧಾರಿಸಿಕೊಳ್ಳಬೇಕು ಎಂದರು.

ರೋಟರಿ ಸಂಸ್ಥೆ ಮಾಜಿ ಕಾರ್ಯದರ್ಶಿ ಎ.ಡಿ. ಮೋಹನ್‍ಕುಮಾರ್, ನಿರ್ದೇಶಕ ಡಿ. ಅರವಿಂದ್, ವಿದ್ಯಾಸಂಸ್ಥೆ ಕಾರ್ಯದರ್ಶಿ ಬೆಳ್ಳಿಯಪ್ಪ, ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್, ಮುಖ್ಯ ಶಿಕ್ಷಕ ಷಣ್ಮುಖ, ಅಧ್ಯಾಪಕ ಕೆ.ಪಿ. ಜಯಕುಮಾರ್, ಇತರರು ಹಾಜರಿದ್ದರು. ಶಿಕ್ಷಕ ಜಯಕುಮಾರ್ ನಿರೂಪಿಸಿದರು.