ಮಡಿಕೇರಿ, ಅ.23: ಜೀವನದ ಸಂಧ್ಯಾಕಾಲದಲ್ಲಿರುವ ಹಿರಿಯ ನಾಗರಿಕರಿಗೆ ಮಾನಸಿಕ ನೆಮ್ಮದಿ ದೊರಕಿಸುವ ನಿಟ್ಟಿನಲ್ಲಿ ಪ್ರತಿಯೋರ್ವರು ಗಮನ ಹರಿಸಬೇಕು ಎಂದು ರೋಟರಿ ಜಿಲ್ಲೆ 3181 ರ ಗವರ್ನರ್ ಜೊಸೇಫ್ ಮ್ಯಾಥ್ಯು ಕರೆ ನೀಡಿದ್ದಾರೆ.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‍ಗೆ ಅಧಿಕೃತ ಭೇಟಿ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಜೊಸೇಫ್ ಮ್ಯಾಥ್ಯು, ಬದುಕಿನ ಕೊನೇ ದಿನಗಳಲ್ಲಿ ಹಿರಿಯ ಜೀವಗಳಿಗೆ ಒಂದಿಷ್ಟು ಸಂತೋಷ, ನೆಮ್ಮದಿಯ ಅಗತ್ಯವಿದೆ. ತನ್ನ ಮಕ್ಕಳು, ಕುಟುಂಬದವರ ಶ್ರೆಯೋಭಿವೃದ್ಧಿಗಾಗಿ ಜೀವನವಿಡೀ ತ್ಯಾಗ ಮಾಡಿರುವ ಜೀವಗಳಿಗೆ ಕೊನೇ ಕಾಲದಲ್ಲಾದರೂ ಒಂದಿಷ್ಟು ನೆಮ್ಮದಿಯನ್ನು ನೀಡುವದು ಪ್ರತೀಯೋರ್ವರ ಕರ್ತವ್ಯವಾಗ ಬೇಕೆಂದು ಹೇಳಿದರು.

ಸುಂಟಿಕೊಪ್ಪದಲ್ಲಿ ವಿಕಾಸ ಜನಸೇವಾ ಟ್ರಸ್ಟ್‍ನ ಆಶ್ರಯಧಾಮದಲ್ಲಿ 20 ಹಿರಿಯ ನಾಗರಿಕರನ್ನು ಸಲಹುತ್ತಿರುವ ವ್ಯವಸ್ಥೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ರೋಟರಿ ಜಿಲ್ಲಾ ಗವರ್ನರ್, ಇಂಥ ಸಂಸ್ಥೆಗೆ ಮತ್ತಷ್ಟು ನೆರವು ನೀಡಬೇಕೆಂದು ಆಶಿಸಿದರು.

ರೋಟರಿ ಜಿಲ್ಲೆಯಲ್ಲಿ ಈ ವರ್ಷ ಜೀವನ್ ಸಂಧ್ಯಾ ಹೆಸರಿನಲ್ಲಿ ಹಿರಿಯ ನಾಗರಿಕರ ಹಿತಕಾಯುವ ಯೋಜನೆ ರೂಪಿಸಿರುವದಾಗಿ ಮಾಹಿತಿ ನೀಡಿದ ಜೋಸೇಫ್ ಮ್ಯಾಥ್ಯು, ಸೇವ್ ಎ ಲೈಫ್ ಎಂಬ ಮತ್ತೊಂದು ಯೋಜನೆ ಮುಖಾಂತರವೂ ಪ್ರಾಣಾಪಾಯ ದಲ್ಲಿರುವವರ ರಕ್ಷಣೆಗೆ ಯೋಜನೆ ಹಮ್ಮಿಕೊಂಡಿರುವದಾಗಿ ತಿಳಿಸಿದರು.

ರೋಟರಿ ವಲಯ 6 ರ ಸಹಾಯಕ ರಾಜ್ಯಪಾಲ ಪಿ.ನಾಗೇಶ್ ಮಾತನಾಡಿ, ಜಗತ್ತಿನಾದ್ಯಂತ ಜನರಿಗೆ ಅಗತ್ಯವಾದ ಸಹಾಯವನ್ನು ವಿವಿಧ ಯೋಜನೆಗಳ ಮುಖಾಂತರ ರೋಟರಿ ಕ್ಲಬ್‍ಗಳು ಮಾಡುತ್ತಾ ಬಂದಿದೆ ಎಂದರು.

ರೋಟರಿ ವಲಯ 6 ರ ಕಾರ್ಯದರ್ಶಿ ಅನಿಲ್ ಎಚ್.ಟಿ. ಮಾತನಾಡಿ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ರೋಟರಿ ಜಿಲ್ಲೆಯಲ್ಲಿಯೇ ಅತ್ಯಂತ ಸಕ್ರಿಯ ಕ್ಲಬ್‍ಗಳ ಲ್ಲೊಂದಾಗಿದ್ದು, ವಿಭಿನ್ನ ಕಾರ್ಯ ಯೋಜನೆಗಳಿಗೆ ಹೆಸರುವಾಸಿಯಾಗಿದೆ ಎಂದÀರು.

ರೋಟರಿ ವಲಯ ಲೆಫ್ಟಿನೆಂಟ್ ಕೇಶವಪ್ರಸಾದ್ ಮುಳಿಯ ಮಾತನಾಡಿ, ರೋಟರಿ ಜಿಲ್ಲಾ ಗವರ್ನರ್ ಸ್ವಾರ್ಥ ರಹಿತ ಸೇವೆಗೆ ಮಾದರಿಯಾಗಿದ್ದು, ಹೀಗಾಗಿಯೇ ರೋಟರಿ ಜಿಲ್ಲೆಯಲ್ಲಿ ನೂರಾರು ಜನಪರ ಕಾರ್ಯಕ್ರಮಗಳು ಯಶಸ್ವಿಯಾಗಿ ಆಯೋಜಿಸಲ್ಪಡುತ್ತಿದೆ ಎಂದು ಶ್ಲಾಘಿಸಿದರು.

ಎಸ್.ಎಂ. ಚೇತನ್ ಸಂಪಾದಕತ್ವದಲ್ಲಿ ಪ್ರಕಟಿತ ಮಿಸ್ಟಿ ಹಿಲ್ಸ್‍ನ ರೋಟೋ ಮಿಸ್ಟ್ ವಾರ್ತಾ ಸಂಚಿಕೆಯನ್ನೂ ಬಿಡುಗಡೆ ಗೊಳಿಸಲಾಯಿತು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಎಂ.ಆರ್.ಜಗದೀಶ್ ಪ್ರಶಾಂತ್ ಸ್ವಾಗತಿಸಿ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ವಂದಿಸಿದರು. ರೋಟರಿ ವಲಯ 6ರ 13 ರೋಟರಿ ಕ್ಲಬ್‍ಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.