ಮಡಿಕೇರಿ, ಅ. 23: ಮದೆ ಗ್ರಾ.ಪಂ. ವ್ಯಾಪ್ತಿಯ ಅವಂದೂರು ಗ್ರಾಮದ ಪಟ್ಟಡ ಕುಟುಂಬಸ್ಥರ ಜಂಟಿ ಆಸ್ತಿಯನ್ನು; ಈ ಕುಟುಂಬದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಯಾರೊಬ್ಬರ ಅರಿವಿಗೆ ಬಾರದಂತೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಪರಭಾರೆ ಮಾಡಿರುವ ಕುರಿತು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ದೂರು ದಾಖಲಾಗಿದೆ. ಮಡಿಕೇರಿ ತಾಲೂಕು ಕಚೇರಿಯ ಮಹಿಳಾ ಸಿಬ್ಬಂದಿಯಾಗಿರುವ ಕಂದಾಯ ನಿರೀಕ್ಷಕಿ ನಕಲಿ ದಾಖಲೆ ಸೃಷ್ಟಿಸುವಲ್ಲಿ ಭಾಗಿಯಾಗಿರುವದಾಗಿ ಪಟ್ಟಡ ಕುಟುಂಬಸ್ಥರು ಆರೋಪಿಸಿದ್ದಾರೆ.

ಅವಂದೂರು ಗ್ರಾಮದ ಪಟ್ಟಡ ಕುಟುಂಬಕ್ಕೆ ಸೇರಿರುವ ಮಹಿಳೆ ಸೋಮವಾರಪೇಟೆ ತಾಲೂಕಿನಲ್ಲಿ ಅಂಗನವಾಡಿಯ ಕಾರ್ಯಕರ್ತೆಯಾಗಿದ್ದು, ವಿವಿಧ ಪ್ರಕರಣಗಳಲ್ಲಿ ಪೊಲೀಸ್ ಮೊಕದ್ದಮೆ ಎದುರಿಸುತ್ತಿರುವ ಕೇಶವ ಎಂಬ ವ್ಯಕ್ತಿಗೆ ಚಿತಾವಣೆಯಿಂದ, ಪಟ್ಟಡ ಕುಟುಂಬದ ಆಸ್ತಿ ಮಾರಾಟಗೊಳಿಸಿದ್ದಲ್ಲದೆ, ಇಡೀ ಕುಟುಂಬಸ್ಥರ ಅರಿವಿಗೆ ಬಾರದೆ ಈ ವ್ಯಕ್ತಿ ಹೆಸರಿಗೆ ಆರ್‍ಟಿಸಿ ತಿದ್ದುಪಡಿಯಾಗಿರುವದು ಸಾಕಷ್ಟು ಸಂಶಯದೊಂದಿಗೆ ಅಸಮಾಧಾನಕ್ಕೆ ಕಾರಣವಾಗಿದೆ.

ಒಂದು ಕುಟುಂಬದ ಆಸ್ತಿಯನ್ನು; ಆ ಕುಟುಂಬಸ್ಥರ ಒಪ್ಪಿಗೆಯಿಲ್ಲದೆ, ಬೇರೊಬ್ಬರ ಹೆಸರಿಗೆ ಆರ್‍ಟಿಸಿ ವರ್ಗಾಯಿಸಲು ಅವಕಾಶವಿಲ್ಲದಿದ್ದರೂ; ಸಂಬಂಧಿಸಿದ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಸೇರಿದಂತೆ ತಹಶೀಲ್ದಾರ್ ಹಂತದಲ್ಲಿ ಈ ಸಂಬಂಧ ಅಕ್ರಮ ನಡೆದಿದೆ ಎಂದು ಕುಟುಂಬಸ್ಥರು ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ಬಳಿ ದೂರು ಸಲ್ಲಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಅವಂದೂರು ಗ್ರಾಮದಲ್ಲಿರುವ ಪಟ್ಟಡ ಕುಟುಂಬದ ಸರ್ವೆ ನಂ. 28/11, 28/24, 28/3 ಸೇರಿದಂತೆ ಸುಮಾರು 2.75 ಎಕರೆ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಲಾಗಿದ್ದು, ಈ ಅವಕಾಶವನ್ನು ದುರುಪಯೋಗ ಮಾಡಿಕೊಂಡಿರುವ ವ್ಯಕ್ತಿ ಪಟ್ಟಡ ಐನ್‍ಮನೆ, ವನಶಾಸ್ತಾವು ಗುಡಿ, ಕುಟುಂಬದ ಸ್ಮಶಾನ ಇತ್ಯಾದಿ ಕಬಳಿಸಲು ಯತ್ನಿಸಿರುವದಾಗಿ ಆರೋಪವಿದೆ.

ಈ ಸಂಬಂಧ ಮೇಲಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕುಟುಂಬದ ಪ್ರಮುಖರಾದ ಪಟ್ಟಡ ಪ್ರಭಾಕರ್, ಶಿವಕುಮಾರ್, ಸುಗುಣ ಹಾಗೂ ಇತರರು ಒತ್ತಾಯಿಸಿದ್ದು, ನ್ಯಾಯ ದೊರಕಿಸದಿದ್ದರೆ, ಅಕ್ರಮ ದಾಖಲೆ ಸೃಷ್ಟಿಸಿರುವ ಕಂದಾಯ ಇಲಾಖೆ ಮಂದಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಂಬಂಧಿಸಿದ ವ್ಯಕ್ತಿ ವಿರುದ್ಧ ಕಾನೂನು ಸಮರ ನಡೆಸಲಿರುವದಾಗಿ ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ.