ಸೋಮವಾರಪೇಟೆ, ಅ. 23: ತಾಲೂಕಿನ ಕೊರ್ಲಳ್ಳಿ, ಚಿಕ್ಕತೋಳೂರು ವ್ಯಾಪ್ತಿಯಲ್ಲಿ ಚಿರತೆ ಬೀಡು ಬಿಟ್ಟಿದ್ದು, ಗ್ರಾಮಸ್ಥರು ಭಯಾತಂಕದಿಂದ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ತಿಂಗಳಿನಿಂದ ಈ ಭಾಗದ ಬೆಟ್ಟ, ಮತ್ತು ಕಾಫಿ ತೋಟದಲ್ಲಿ ಚಿರತೆ ಕಾಣಿಸಿಕೊಳ್ಳು ತ್ತಿದ್ದು, ಈಗಾಗಲೇ ಒಂದು ಸಾಕು ನಾಯಿಯನ್ನು ಹೊತ್ತೊಯ್ದಿದ್ದರೆ, ಏಳೆಂಟು ನಾಯಿಗಳ ಮೇಲೆ ಧಾಳಿ ನಡೆಸಿದೆ.
ನಿನ್ನೆ ದಿನ ಶಾಲಾ ಮಕ್ಕಳನ್ನು ಕರೆದೊಯ್ಯುವ ವ್ಯಾನ್‍ನ ಚಾಲಕನಿಗೆ ಕಾಣಿಸಿಕೊಂಡಿರುವ ಚಿರತೆ, ಕಾಫಿ ತೋಟದೊಳಗೆ ಓಡಿ ಹೋಗಿದೆ. ಮುಖ್ಯ ರಸ್ತೆಯಲ್ಲಿಯೇ ಚಿರತೆ ಓಡಾಡುತ್ತಿರುವದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಮೊನ್ನೆ ದಿನ ಗ್ರಾಮದ ರಾಜಪ್ಪ ಎಂಬವರು ತಮ್ಮ ಮನೆಯ ಸಮೀಪವಿರುವ ಕಾಫಿ ತೋಟಕ್ಕೆ ತೆರಳುತ್ತಿದ್ದ ಸಂದರ್ಭ ನಾಯಿಗಳು ಚಿರತೆಯನ್ನು ಬೆನ್ನಟ್ಟಿವೆ. ಭಯದಿಂದ ರಾಜಪ್ಪ ಅವರು ಮನೆಗೆ ಓಡಿಬಂದಿದ್ದಾರೆ.
ಮನೆಯ ಸುತ್ತಮುತ್ತಲಲ್ಲೇ ಚಿರತೆ ಕಾಣಿಸಿಕೊಳ್ಳುತ್ತಿರುವದರಿಂದ ಸಾರ್ವಜನಿಕರು ಕಂಗಾಲಾಗಿದ್ದು, ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲೂ ಭಯಪಡುವಂತಾಗಿದೆ. ಇದರೊಂದಿಗೆ ಗದ್ದೆ, ತೋಟಗಳಲ್ಲಿ ಭಯದಿಂದಲೇ ಕೆಲಸ ನಿರ್ವಹಿಸಬೇಕಿದೆ.
ಗ್ರಾಮಕ್ಕೆ ಭೇಟಿ ನೀಡಿರುವ ಅರಣ್ಯ ಇಲಾಖಾಧಿಕಾರಿಗಳು ಗ್ರಾಮಸ್ಥರಿಗೆ ಪಟಾಕಿ ನೀಡಿದ್ದು, ಚಿರತೆಯನ್ನು ಓಡಿಸಲು ಗ್ರಾಮಸ್ಥರು ಸಂಜೆ, ರಾತ್ರಿ ವೇಳೆ ಪಟಾಕಿ ಸಿಡಿಸುತ್ತಿದ್ದಾರೆ. ಕೊರ್ಲಳ್ಳಿ ಮತ್ತು ಚಿಕ್ಕತೋಳೂರು ಗ್ರಾಮದಲ್ಲಿ ಓಡಾಡುತ್ತಿರುವ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಬಗ್ಗೆ ಎಸಿಎಫ್ ನೆಹರು ಅವರಿಗೆ ಮೌಖಿಕ ಮನವಿ ಸಲ್ಲಿಸಲಾಗಿದ್ದು, ಚಿರತೆ ಸೆರೆಗೆ ಬೋನು ಅಳವಡಿಸುವಂತೆ ಕೋರಿದ್ದಾರೆ.