ಮಡಿಕೇರಿ, ಅ. 23: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮವನ್ನು (20 ಅಂಶ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಸರಕಾರ ಎಂಬಂತೆ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿಯೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲು ಸರಕಾರ ಹೊಸ ಕ್ರಮವನ್ನು ಜಾರಿಗೆ ತಂದಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಗ್ರಾ.ಪಂ. ಅಧ್ಯಕ್ಷರು ಸೇರಿದಂತೆ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದಿಯಾಗಿ ಅಗತ್ಯವಿರುವ ಪ್ರಮುಖ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಈ ತ್ರೈಮಾಸಿಕ (ಕೆಡಿಪಿ) ಸಭೆ ನಡೆಸಲು ಸರಕಾರ ಕಳೆದ ಜೂನ್ ತಿಂಗಳಿನಲ್ಲಿ ಆದೇಶ ಹೊರಡಿಸಿದೆ.
ಈ ಕುರಿತಾಗಿ ಕಳೆದ ಜೂನ್‍ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರಾದ ಕೆ. ಯಾಲಕ್ಕಿಗೌಡ ಅವರು ಸರಕಾರದ ನಿರ್ದೇಶನದ ಅನ್ವಯ ಸುತ್ತೋಲೆ ಹೊರಡಿಸಿದ್ದಾರೆ. ಇದರಂತೆ ಆಯಾ ಜಿಲ್ಲೆಗಳ ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಎಲ್ಲಾ ತಾ.ಪಂ. ಕಾರ್ಯನಿರ್ವಾ ಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇವರ ಮೂಲಕ ಈ ಸಭೆಯನ್ನು ಆಯೋಜಿಸಲು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ವಿವಿಧ ಗ್ರಾ.ಪಂ.ಗಳಲ್ಲಿ ಈ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗಳು ಇದೇ ಪ್ರಥಮ ಬಾರಿಗೆ ಜರುಗುತ್ತಿದೆ.
ಸಂವಿಧಾನದ 73ನೇ ತಿದ್ದುಪಡಿಯ ಆಶೋತ್ತರಗಳಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾಯಿಸಲಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ಅನುದಾನ ಚಟುವಟಿಕೆ ಹಾಗೂ ಅಧಿಕಾರಿಗಳನ್ನು ಮೂರು ಸ್ಥರದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾಯಿಸ ಲಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಅಭಿವೃದ್ಧಿ ಯೋಜನೆಗಳಡಿ ಬಿಡುಗಡೆ ಗೊಳಿಸುತ್ತಿರುವ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸುತ್ತಿವೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 309 ಮತ್ತು 310ರ ಅನ್ವಯ ಸರಕಾರವು ಜಿಲ್ಲಾ, ತಾಲೂಕು ಮತ್ತು ಗ್ರಾ.ಪಂ.ಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಕ್ರಿಯಾ ಯೋಜನೆಯ ಕರಡನ್ನು ಸಿದ್ಧಪಡಿಸಲು ಪ್ರತಿಯೊಂದು ಜಿಲ್ಲೆಗೂ ಒಂದೊಂದು ಜಿಲ್ಲಾ ಯೋಜನಾ ಸಮಿತಿ, ಪ್ರತಿ ತಾಲೂಕಿಗೂ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಗಳನ್ನು ಈಗಾಗಲೇ ರಚಿಸಿದೆ. ಜೊತೆಗೆ ಕರ್ನಾಟಕ ಅಭಿವೃದ್ಧಿ ಕಾರ್ಯ ಕ್ರಮದಡಿ (20 ಅಂಶ ಕಾರ್ಯಕ್ರಮವು ಸೇರಿದಂತೆ) ಸಾಧಿಸಿದ ಪ್ರಗತಿಯನ್ನು ಪರಿಶೀಲಿಸಲು ಜಿಲ್ಲಾಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ವಿಧಾನಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಕಾರ್ಯಕ್ರಮವು ಸೇರಿದಂತೆ) ಪ್ರಗತಿ ಪರಿಶೀಲನಾ ಸಮಿತಿಗಳನ್ನು ಈಗಾಗಲೇ ರಚಿಸಿದೆ.
ಬಡತನ ನಿರ್ಮೂಲನೆ, ಮಕ್ಕಳ ಮತ್ತು ಗರ್ಭಿಣಿಯರ ಆರೋಗ್ಯಕ್ಕಾಗಿ ಪೌಷ್ಟಿಕಾಂಶ ಒದಗಿಸುವ ಕಾರ್ಯ ಕ್ರಮಗಳ ಅನುಷ್ಠಾನ, ಮಕ್ಕಳ ಮತ್ತು ಮಹಿಳೆಯರ ಆರೋಗ್ಯ, ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಪಡಿತರ ಧಾನ್ಯಗಳ ಸಮರ್ಪಕ ವಿತರಣೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾರ್ಯನಿರ್ವಹಣೆ, ಪಶುಪಾಲನಾ ಚಿಕಿತ್ಸಾ ಕೇಂದ್ರಗಳ ಕಾರ್ಯನಿರ್ವಹಣೆ, ಗ್ರಾ.ಪಂ. ಹಂತದಲ್ಲಿನ ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಮತ್ತು ತರಗತಿಗಳ ನಿರ್ವಹಣೆಯ ಬಗ್ಗೆ, ಕೃಷಿ ತೋಟಗಾರಿಕೆ, ರೇಷ್ಮೆ ಮತ್ತು ಸಂಬಂಧಪಟ್ಟ ಇತರೆ ಇಲಾಖೆಯ ಕಾರ್ಯಚಟುವಟಿಕೆಗಳ ಅನುಷ್ಠಾನ ಹಾಗೂ ಸಾಧಿಸಿರುವ ಪ್ರಗತಿಯನ್ನು ಪರಿಶೀಲಿಸುವ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಕಾರ್ಯಕ್ರಮವು ಸೇರಿದಂತೆ) ಪ್ರಗತಿ ಪರಿಶೀಲನಾ ಸಮಿತಿಯನ್ನು ರಚಿಸಲು ಸರಕಾರವು ತೀರ್ಮಾನಿಸಿದೆ.
ಈ ಸಮಿತಿಗೆ ಹೋಬಳಿ ಮತ್ತು ಗ್ರಾ.ಪಂ. ಮಟ್ಟದಲ್ಲಿ ಎಲ್ಲಾ ಅಭಿವೃದ್ಧಿ ಇಲಾಖೆಗಳ ಸ್ಥಳೀಯ ಅಧಿಕಾರಿ, ಸಿಬ್ಬಂದಿಗಳಿಂದ ಅವರುಗಳಿಗೆ ಸಂಬಂಧಿಸಿದ ಯೋಜನೆ ಮತ್ತು ಅನುದಾನದ ವಿವರಗಳನ್ನು ಹಾಗೂ ಇವುಗಳ ಅನುಷ್ಠಾನದಲ್ಲಿ ಸಾಧಿಸಿರುವ ಪ್ರಗತಿಯನ್ನು ಪರಿಶೀಲಿಸಲು ಹಾಗೂ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶವನ್ನು ಸರಕಾರವು ಹೊಂದಿರುತ್ತದೆ. ಆದ್ದರಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತ್ರೈಮಾಸಿಕ ಪರಿಶೀಲನಾ ಸಮಿತಿಯ ಸಭೆ ನಡೆಸುವದು ಅತ್ಯವಶ್ಯಕವಾಗಿದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಷರತ್ತು ಹಾಗೂ ನಿಬಂಧನೆಗಳು
* ಗ್ರಾ.ಪಂ. ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಪರಿಶೀಲನಾ ಸಮಿತಿಯು ತ್ರೈಮಾಸಿಕವಾಗಿ ಏಪ್ರಿಲ್, ಜುಲೈ, ಅಕ್ಟೋಬರ್, ಡಿಸೆಂಬರ್ ತಿಂಗಳುಗಳ ಮೊದಲನೇ ವಾರದಲ್ಲಿ ಸಭೆ ಸೇರುವದು.
* ಒಂದು ವೇಳೆ ಸದರಿ ಸಭೆಗೆ ಗ್ರಾ.ಪಂ. ಅಧ್ಯಕ್ಷರು ಗೈರು ಹಾಜರಾದಲ್ಲಿ, ಗ್ರಾ.ಪಂ. ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಿತಿಯು ಸಭೆ ನಡೆಸತಕ್ಕದ್ದು. ಈ ಇಬ್ಬರ ಗೈರು ಹಾಜರಿಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸತಕ್ಕದ್ದು.
* ಸದಸ್ಯ ಕಾರ್ಯದರ್ಶಿಗಳು ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಕೆಡಿಪಿ ಸಭೆಯನ್ನು ನಡೆಸಲು ಕ್ರಮ ವಹಿಸಬೇಕು.
* ಸಭೆಯ ದಿನಾಂಕವನ್ನು ಗ್ರಾ.ಪಂ. ಅಧ್ಯಕ್ಷರಿಂದ ಪಡೆದು, ಒಂದು ವಾರ ಮುಂಚಿತವಾಗಿ ಸಮಿತಿಯ ಸದಸ್ಯರಿಗೆ ತಿಳುವಳಿಕೆ ಸೂಚನೆಯನ್ನು ನೀಡಬೇಕು.
* ಸಂಬಂಧಪಟ್ಟ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟಂತೆ ಹೋಬಳಿ, ಗ್ರಾ.ಪಂ. ಮಟ್ಟದ ಅಧಿಕಾರಿ, ಸಿಬ್ಬಂದಿಗಳನ್ನು ಗ್ರಾ.ಪಂ. ಕೆಡಿಪಿ ಸಭೆಗೆ ಹಾಜರಾಗಲು ನಿರ್ದಿಷ್ಟಪಡಿಸಿ ಆದೇಶ ಹೊರಡಿಸುವದು.
* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಗ್ರಾಮ ಪಂಚಾಯಿತಿಗಳು ಅನುಷ್ಠಾನ ಗೊಳಿಸುತ್ತಿರುವ ಯೋಜನೆಗಳ ಬಗ್ಗೆ ನಮೂನೆ-1ರಲ್ಲಿ ಮಾಹಿತಿ ಒದಗಿಸುವದು.
* ಕೆಡಿಪಿ ಸಭೆಗೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಆರ್ಥಿಕ ಮತ್ತು ಭೌತಿಕ ಪ್ರಗತಿ ವಿವರಗಳನ್ನು ಪ್ರತ್ಯೇಕ ನಮೂನೆಯಲ್ಲಿ ನೀಡಲಾಗುವದು.
* ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಷೆಡ್ಯೂಲ್-Iಗಿ ಅಂಶಗಳಡಿ ಸಾಧಿಸಿರುವ ಪ್ರಗತಿಯನ್ನು ಪರಿಶೀಲಿಸುವದು.
ಸಭೆಯ ನಂತರ ಸಭಾ ನಡಾವಳಿ ಗಳನ್ನು ಮೂರು ದಿನಗಳೊಳಗಾಗಿ ಸಿದ್ಧಪಡಿಸಿ ಸಂಬಂಧಪಟ್ಟ ಎಲ್ಲಾ ಸದಸ್ಯರಿಗೆ, ತಾಲೂಕು ಮಟ್ಟದ ಇಲಾಖೆಯ ಮುಖ್ಯಸ್ಥರಿಗೆ, ಆಹ್ವಾನಿತರಿಗೆ ಅಗತ್ಯ ಕ್ರಮಕ್ಕಾಗಿ ಕಳುಹಿಸಬೇಕು ಹಾಗೂ ಸಮಿತಿಯು ನೀಡಿದ ಸಲಹೆ ಸೂಚನೆಗಳ ಮೇಲೆ ಸಂಬಂಧಪಟ್ಟ ಹೋಬಳಿ, ಗ್ರಾ.ಪಂ. ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಗಳಿಂದ ಕೈಗೊಂಡ ಕ್ರಮದ ಅನುಪಾಲನಾ ವರದಿ ಪಡೆದು, ಮುಂದಿನ ಸಭೆಯಲ್ಲಿ ಮಂಡಿಸಿ, ಚರ್ಚಿಸಿ ಯೋಜನೆಗಳನ್ನು ಪರಿಣಾಮ ಕಾರಿಯಾಗಿ ಅನುಷ್ಠಾನ ಗೊಳಿಸಲು ಅಗತ್ಯ ಕ್ರಮವಹಿಸಲು ಸೂಚಿಸಿದೆ.