*ಗೋಣಿಕೊಪ್ಪಲು, ಅ. 23: ಇಲ್ಲಿನ ಆಟೋ ಮಾಲೀಕರ ಹಾಗೂ ಚಾಲಕರ ಸಂಘ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 11ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1 ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಗೌರವಾಧ್ಯಕ್ಷ ಸಿ.ಕೆ. ಬೋಪಣ್ಣ ಮಾಹಿತಿ ನೀಡಿದ್ದಾರೆ.

ಆಟೋ ಚಾಲಕರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ಆಟೋ ನಿಲ್ದಾಣದಲ್ಲಿ ಧ್ವಜಾರೋಹಣ ನೆರವೇರಿಸಿ ನಂತರ 10 ಗಂಟೆಗೆ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಿಂದ ರಾಜಬೀದಿಯ ಮೂಲಕ ಉಮಾಮಹೇಶ್ವರಿ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿದೆ. ಮೆರವಣಿಗೆಗೆ ಅತಿಥಿಗಳು ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ಕನ್ನಡಾಂಭೆಯ ಕಲಾಕೃತಿಯ ತೇರಿನೊಂದಿಗೆ ಸಾಗಲಿದ್ದು, ಶಾಲಾ ಮಕ್ಕಳಿಂದ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಛದ್ಮವೇಷಗಳು ಆಕರ್ಷಿಸಲಿದೆ. ಜತೆಗೆ ಡೊಳ್ಳುಕುಣಿತ ಗಮನಸೆಳೆಯಲಿದೆ. ನಂತರ ಇಲ್ಲಿನ ಬಸ್ ನಿಲ್ದಾಣದಲ್ಲಿ ಗ್ರೀಸ್ ಕಂಬ ಹತ್ತುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 7 ಗಂಟೆಗೆ ಸಾಂಸ್ಕೃತಿಕ ಸಂಜೆಗೆ ಮುಖ್ಯ ಅತಿಥಿಗಳು ಚಾಲನೆ ನೀಡಲಿದ್ದು, ನಂತರ ಇಲ್ಲಿನ ಬಸ್ ನಿಲ್ದಾಣದಲ್ಲಿ ಬೆಂಗಳೂರಿನ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮಗಳು ನಡೆಯಲಿದೆ. ರಾಜ್ಯೋತ್ಸವದ ಅಂಗವಾಗಿ ತಾ. 26 ರಂದು ಆಟೋ ಚಾಲಕರು ಹಾಗೂ ಮಾಲೀಕರಿಗಾಗಿ ಕಾಲ್ಚೆಂಡು ಪಂದ್ಯಾಟವನ್ನು ಇಲ್ಲಿನ ಅನುದಾನಿತ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಅಧ್ಯಕ್ಷ ಜಿಮ್ಮ ಸುಬ್ಬಯ್ಯ, ಉಪಾಧ್ಯಕ್ಷ ದೇವಪ್ಪ, ಪ್ರಧಾನ ಕಾರ್ಯದರ್ಶಿ ಕೆ.ವೈ. ಅಶ್ವತ್, ಸಹಕಾರ್ಯದರ್ಶಿ ಸುರೇಶ್, ನಿರ್ದೇಶಕರುಗಳಾದ ರಾಜಬಾಬು, ವಿನು ಉಪಸ್ಥಿತರಿದ್ದರು.