ಮಡಿಕೇರಿ, ಅ. 23: ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರು ಸಲಹೆ ಮಾಡಿದ್ದಾರೆ.
ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಹಾಗೂ ಉದ್ಯಮಗಳು ವಿಚಕ್ಷಣ ಅರಿವು ಸಪ್ತಾಹ ಆಚರಿಸುತ್ತಿದ್ದು, ಈ ಪ್ರಯುಕ್ತ ಕಾರ್ಪೊರೇಶನ್ ಬ್ಯಾಂಕ್, ಲೀಡ್ ಬ್ಯಾಂಕ್ ವತಿಯಿಂದ ‘ಪ್ರಾಮಾಣಿಕತನ-ಬದುಕಿನ ಹಾದಿ’ ಎಂಬ ವಿಷಯದ ಕುರಿತು ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಾಮಾಣಿಕತೆ ರೂಢಿಯಿಂದ ಬರಬೇಕು. ತತ್ವಗಳನ್ನು ಅಳವಡಿಸಿ ಕೊಳ್ಳುವಂತಾಗಬೇಕು, ಪ್ರಾಮಾಣಿಕತೆ ಯಿಂದ ಸಂಬಂಧಗಳು ಹೆಚ್ಚುತ್ತವೆ. ಅದನ್ನು ಉಳಿಸಿಕೊಳ್ಳಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಹೇಗೆ ಬದುಕಿದರೂ ಪರವಾಗಿಲ್ಲ. ಮಕ್ಕಳು ಚೆನ್ನಾಗಿರಲಿ ಎಂಬ ಭಾವನೆ ಇದೆ. ಆದರೆ ಪೋಷಕರನ್ನು ನೋಡಿ ಮಕ್ಕಳು ಕಲಿಯುತ್ತಾರೆ ಎಂಬದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ತಮ್ಮ ದಿನನಿತ್ಯದ ಚಟುವಟಿಕೆ ಗಳನ್ನು ಸಹ ಮಕ್ಕಳು ಗಮನಿಸುತ್ತಾರೆ. ಹಾಗೆಯೇ ಸಮಾಜವು ಸಹ ಗಮನಿಸುತ್ತದೆ ಎಂಬದನ್ನು ತಿಳಿಯಬೇಕಿದೆ ಎಂದರು.
ತಪ್ಪು ಮಾಡಿದ್ದಲ್ಲಿ ಇಡೀ ಸಮಾಜಕ್ಕೆ ತಿಳಿಯುತ್ತದೆ. ಇದರಿಂದ ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿ ಪಿ. ಚಂದನ್ ಮಾತನಾಡಿ ಜೀವನದಲ್ಲಿ ಪ್ರತಿಯೊಬ್ಬರಲ್ಲೂ ಛಲ ಇರಬೇಕು. ಉದಾಸೀನ ಮಾಡಬಾರದು. ಇತ್ತೀಚಿನ ದಿನಗಳಲ್ಲಿ ಉದ್ಯೋಗ ಅವಕಾಶಗಳು ವಿಫುಲವಾಗಿದ್ದು, ಅವುಗಳನ್ನು ಬಳಸಿಕೊಳ್ಳಬೇಕು. ಜೊತೆಗೆ ಸ್ವ ಉದ್ಯೋಗ ಕೈಗೊಳ್ಳಲು ಮುಂದಾಗಬೇಕು ಎಂದರು.
ಕಾರ್ಪೊರೇಶನ್ ಬ್ಯಾಂಕಿನ ವಲಯ ಕಚೇರಿಯ ಉಪ ಮಹಾ ಪ್ರಬಂಧಕ ಮಂಜುನಾಥ್ ಮಾತನಾಡಿ ಬ್ಯಾಂಕಿನ ಹಣಕಾಸು ವ್ಯವಹಾರಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು ಎಂದರು.
ಗ್ರಾಹಕರಿಗೆ ಸಾಲದ ಅವಶ್ಯಕತೆ ಇರುತ್ತದೆ. ಗ್ರಾಹಕರಿಗೆ ಸಕಾಲದಲ್ಲಿ ಸಾಲ ದೊರಕಿಸಬೇಕು. ಯಾವದೇ ಕಾರಣಕ್ಕೂ ಸತಾಯಿಸಬಾರದು ಎಂದರು.
ಬ್ಯಾಂಕುಗಳಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ಸಮಾನ ಜವಾಬ್ದಾರಿ ಮತ್ತು ಕರ್ತವ್ಯವಿದ್ದು, ಅದರಂತೆ ಕಾರ್ಯ ನಿರ್ವಹಿಸಬೇಕು. ಎಲ್ಲರೂ ಪಾರದರ್ಶಕವಾಗಿ ಕಾರ್ಯನಿರ್ವಹಿಸ ಬೇಕು. ಗ್ರಾಹಕರಲ್ಲಿ ನಂಬಿಕೆ, ವಿಶ್ವಾಸ ಗಳಿಸಬೇಕು ಎಂದು ಸಲಹೆ ಮಾಡಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಾದ ಪಿ.ಕೆ.ರಕ್ಷಿತ, ಪ್ರತೀಕ್ಷಾ, ಎಸ್.ಕೀರ್ತನ ಅವರು ಪ್ರಾಮಾಣಿಕತೆ ಅನುಸರಿಸುವ ಬಗ್ಗೆ ಮಾಹಿತಿ ನೀಡಿದರು. ಲೀಡ್ ಬ್ಯಾಂಕ್ನ ವ್ಯವಸ್ಥಾಪಕ ಬಾಲಚಂದ್ರ ಮಾತನಾಡಿದರು. ನಬಾರ್ಡ್ನ ಸಹಾಯಕ ಮಹಾ ಪ್ರಬಂಧಕ ಪಿ.ವಿ. ಶ್ರೀನಿವಾಸ್ ಇತರರು ಇದ್ದರು.