ಗೋಣಿಕೊಪ್ಪಲು, ಅ. 23: ಗೋಣಿಕೊಪ್ಪಲುವಿನ ಕಾವೇರಿ ಎಜುಕೇಷನ್ ಸೊಸೈಟಿಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಪೊನ್ನಂಪೇಟೆಯ ಚೆರಿಯಪಂಡ ಕೆ.ಉಮೇಶ್, ಗೌರವ ಕಾರ್ಯದರ್ಶಿ ಯಾಗಿ ಕುಟ್ಟಂಡ ಜಿ.ಉತ್ತಪ್ಪ(ವಿಜಯ್) ಉಪಾಧ್ಯಕ್ಷರಾಗಿ ಮೂಕಳಮಾಡ ಕೆ.ಮೊಣ್ಣಪ್ಪ, ಖಜಾಂಚಿಯಾಗಿ ಚೊಟ್ಟೆಯಂಡಮಾಡ ಡಿ.ಮಾದಪ್ಪ ಆಯ್ಕೆಗೊಂಡಿದ್ದಾರೆ.
12 ನಿರ್ದೇಶಕರ ಆಡಳಿತ ಮಂಡಳಿಯಲ್ಲಿ ಬುಧವಾರ ಕಾಲೇಜಿನ ಪದಾಧಿಕಾರಿಗಳಿಗೆ ಚುನಾವಣೆ ನಡೆಯಿತು. ಅತ್ಯಂತ ಕುತೂಹಲಕಾರಿ ಬೆಳವಣಿಗೆಯಲ್ಲಿ ಅಂತಿಮವಾಗಿ ಆಡಳಿತ ಮಂಡಳಿಯ ತೀರ್ಮಾನದಂತೆ ತಲಾ 30 ತಿಂಗಳ ಅವಧಿಗೆ ಪದಾಧಿಕಾರಿಗಳ ಆಯ್ಕೆಗೆ ಒಮ್ಮತ ಮೂಡಿ ಬಂತು. ಮೊದಲ 30 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಸಿ.ಕೆ.ಉಮೇಶ್, ಕಾರ್ಯದರ್ಶಿಯಾಗಿ ಕೆ.ಜಿ. ಉತ್ತಪ್ಪ (ವಿಜಯ್) ಉಪಾಧ್ಯಕ್ಷರಾಗಿ ಎಂ.ಕೆ. ಮೊಣ್ಣಪ್ಪ, ಖಜಾಂಚಿಯಾಗಿ ಸಿ.ಡಿ. ಮಾದಪ್ಪ ಆಯ್ಕೆಗೊಂಡಿದ್ದಾರೆ. ಇಟ್ಟೀರ ಕೆ.ಬಿದ್ದಪ್ಪ, ಚೆಕ್ಕೆರ ಎಂ.ಅಚ್ಚಯ್ಯ, ಕಬ್ಬಚ್ಚಿರ ಎಂ.ಸುಬ್ರಮಣಿ, ಕುಲ್ಲಚಂಡ ಪಿ.ಬೋಪಣ್ಣ, ಚೆಪ್ಪುಡೀರ ಎಂ.ಕಿರಣ್, ಕುಪ್ಪಂಡ ಎಂ.ಬೆಳಿಯಪ್ಪ (ಮೋತಿ), ಬುಟ್ಟಿಯಂಡ ಎ.ಚಂಗಪ್ಪ ಹಾಗೂ ಪುಚ್ಚಿಮಾಡ ಟಿ.ಸುಭಾಶ್ ಸುಬ್ಬಯ್ಯ ನಿರ್ದೇಶಕರಾಗಿದ್ದಾರೆ. ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಚೆರಿಯಪಂಡ ಕೆ. ಉಮೇಶ್ ಪ್ರಸ್ತುತ ಆಡಳಿತ ಮಂಡಳಿಯ ಸರ್ವ ಸದಸ್ಯರ ಸಹಕಾರ ಪಡೆದು ಸಂಸ್ಥೆಯನ್ನು ಮತ್ತಷ್ಟು ಬೆಳೆಸುವ ಇಚ್ಚೆ ವ್ಯಕ್ತಪಡಿಸಿದರು.