ಗೋಣಿಕೊಪ್ಪ ವರದಿ, ಅ. 23 : ಶ್ರೀಗಂಧದ ಮರ ಕಳ್ಳತನ ವಿರುದ್ದ ಕಾರ್ಯಾಚರಣೆ ನಡೆಸಿರುವ ಪೊನ್ನಂಪೇಟೆ ಅರಣ್ಯ ವಲಯ ಅಧಿಕಾರಿಗಳ ತಂಡ, ಆರು ಜನರ ವಿರುದ್ದ ಪ್ರಕರಣ ದಾಖಲಿಸಿ ಕೊಂಡು, ಐವರನ್ನು ವಶಕ್ಕೆ ಪಡೆದಿದ್ದು, ಓರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಬಂಧಿತರಿಂದ ಸುಮಾರು 11 ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದು ಕ್ರಮಕ್ಕೆ ಮುಂದಾಗಿದೆ.
ನಲ್ಲೂರು ನಿವಾಸಿಯಾದ ಕುಮಾರ್ (35), ಸತ್ಯ, (34), ಕುಪ್ಪಡಿ (35), ಗಣೇಶ್ (36), ಗೋಣಿಕೊಪ್ಪದ ಗುಜರಿ ವ್ಯಾಪಾರಿ ರಾಜಾ (40) ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಮದ್ಯವರ್ತಿ ಗೋಣಿಕೊಪ್ಪದ ಮುರುಗಾ (37) ತಲೆ ಮರೆಸಿಕೊಂಡಿದ್ದು, ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ.
ಮಂಗಳವಾರ ರಾತ್ರಿ ನಲ್ಲೂರು ಗ್ರಾಮದಲ್ಲಿ ಅರಸು, ಮಹೇಶ್ ಎಂಬವರ ತೋಟದ ಬದಿಯಲ್ಲಿದ್ದ ಮರವನ್ನು ಕಡಿದು ಸಾಗಾಟಕ್ಕೆ ಯತ್ನಿಸುತ್ತಿದ್ದಾಗ ದಾಳಿ ನಡೆಸಿ ಬಂಧಿತರಿಂದ 8 ಮರದ ತುಂಡುಗಳು ಹಾಗೂ 3 ಮರದ ಬೇರಿನ ತುಂಡುಗಳನ್ನು ವಶಕ್ಕೆ ಪಡೆಯಲಾಯಿತು.
ಗ್ರಾಮದಲ್ಲಿ ನಿರಂತರವಾಗಿ ಗಂಧದ ತುಂಡುಗಳನ್ನು ಕಡಿದು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿರುವ ಆರೋಪಿಗಳು, ಮದ್ಯವರ್ತಿ ಮುರುಗ ಅವರ ಮೂಲಕ ಮಾರಾಟ ಮಾಡು ತ್ತಿರುವದನ್ನು ಕಾರ್ಯಾಚರಣೆ ತಂಡಕ್ಕೆ ತಿಳಿಸಿದ್ದಾರೆ. ಇದರಂತೆ ಮುರುಗ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ.
ಡಿಎಫ್‍ಒ ಮರಿಯಾ ಕ್ರಿಸ್ತರಾಜ್, ಎಸಿಎಫ್ ಶ್ರೀಪತಿ ಮಾರ್ಗದರ್ಶನದಲ್ಲಿ ಪ್ರೊಬೆಷನರಿ ಎಸಿಎಫ್ ಮಾಲಿನಿ, ಪೊನ್ನಂಪೇಟೆ ಆರ್‍ಎಫ್‍ಒ ಅರಮಣಮಾಡ ತೀರ್ಥ, ಡಿಆರ್‍ಎಫ್‍ಒ ಮಂಜು ನಾಥ್, ಗಣೇಶ್, ಸಿಬ್ಬಂದಿ ರಾಘವನಾಯ್ಕ, ಜಿಡ್ಡಿಮಣಿ, ಸಾಗರ್, ಸಂಜಯ್ ಕಾರ್ಯಾ ಚರಣೆ ಯಲ್ಲಿದ್ದರು.