ಕೂಡಿಗೆ, ಅ. 23: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಮಟ್ಟದ ಕೆಡಿಪಿ ಸಭೆಯು ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷೆ ಭವ್ಯ ಅಧ್ಯಕ್ಷತೆಯಲ್ಲಿ ನಡೆಯಿತು.

ಗೊಂದಿಬಸನಹಳ್ಳಿಯಲ್ಲಿ ಬೀಳುವ ಹಂತದಲ್ಲಿರುವ ಮರವನ್ನು ಕಡಿದು ತೆರವುಗೊಳಿಸಲು ಅನೇಕ ಬಾರಿ ಮಾಸಿಕ ಮತ್ತು ಗ್ರಾಮ ಸಭೆಯಲ್ಲಿ ತೀರ್ಮಾನ ಕೈಗೊಂಡು ಅರಣ್ಯ ಇಲಾಖೆಯವರಿಗೆ ಕಡಿದು ತಮ್ಮ ಸಂಗ್ರಹಣಾ ಘಟಕಕ್ಕೆ ಸಾಗಾಟ ಮಾಡಲು ತಿಳಿಸಿದ್ದರೂ ಇದುವರೆಗೂ ಯಾವದೇ ಕ್ರಮಕೈಗೊಂಡಿಲ್ಲ. ಗೊಂದಿಬಸವನಹಳ್ಳಿಯಲ್ಲಿ ಆ ಮರದಿಂದ ಭಾರೀ ಅನಾಹುತವಾಗುವ ಸಂಭವವಿದ್ದು, ಅರಣ್ಯ ಇಲಾಖೆಯವರು ತಕ್ಷಣ ಬೃಹತ್ ಮರವನ್ನು ತೆರವುಗೊಳಿಸಬೇಕು ಎಂದು ಸ್ಥಳೀಯ ಜನಪ್ರತಿನಿಧಿಗಳಾದ ಹರೀಶ್, ಜಗದೀಶ್ ಒತ್ತಾಯಿಸಿದರು.

ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಶಾಲೆಗೆ ತೆರಳುವ ವಿದ್ಯಾರ್ಥಿ ಗಳಿಗೆ ಹಾಗೂ ಸಾರ್ವಜನಿಕರಿಗೂ ನಾಯಿಗಳು ಕಚ್ಚಿದ್ದು, ಈ ಬೀದಿ ನಾಯಿಗಳನ್ನು ನಿಯಂತ್ರಣ ಮಾಡಬೇಕು ಎಂದು ಪಶುಪಾಲನಾ ಇಲಾಖೆಯ ಅಧಿಕಾರಿಗೆ ಸೂಚಿಸಲಾಯಿತು.

ಸಭೆಯಲ್ಲಿ ತೋಟಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಪಶುಪಾಲನಾ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಮಾಹಿತಿಗಳನ್ನು ಒದಗಿಸಿದರು.

ಸದಸ್ಯರಾದ ಸಂತೋಷ್, ಸುಚಿತ್ರ, ರುದ್ರಾಂಬೆ, ಗಣೇಶ್, ಜಯಲಕ್ಷ್ಮಿ, ಪಾರ್ವತಿ, ಹರೀಶ್, ಜಗದೀಶ್, ರುಕ್ಯಾ ಸೇರಿದಂತೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಇದ್ದರು.