ಮಡಿಕೇರಿ, ಅ. 23: ದಕ್ಷಿಣ ಕೊಡಗಿನ ಕಾರ್ಯವ್ಯಾಪ್ತಿಯನ್ನು ಒಳಗೊಂಡಂತೆ ಗೋಣಿಕೊಪ್ಪಲುವನ್ನು ಕೇಂದ್ರವಾಗಿರಿಸಿಕೊಂಡು ನೂತನವಾಗಿ ಕಾವೇರಿ ಕೊಡವ ಪೊಮ್ಮಕ್ಕಡ ಕೂಟ ಎಂಬ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ. ಇತ್ತೀಚೆಗೆ ಗೋಣಿಕೊಪ್ಪಲುವಿನ ಹೊಟೇಲ್ ಸಿಲ್ವರ್ಸ್ಕೈ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ಸಂಘವನ್ನು ರಚಿಸಲಾಗಿದೆ.
ಕೊಡವ ಜನಾಂಗದ ಮಹಿಳೆಯರ ನಡುವೆ ಪರಸ್ಪರ ಸಾಮರಸ್ಯ ಬಾಂಧವ್ಯ ವೃದ್ಧಿ, ಸಾಮಾಜಿಕ ಚಟುವಟಿಕೆ, ಆಚಾರ-ವಿಚಾರ ಸಂಸ್ಕøತಿಯ ಪರಿಪಾಲನೆಯ ಉದ್ದೇಶ ಹಾಗೂ ಇವುಗಳಿಗೆ ಧಕ್ಕೆಯಾಗುವಂತಹ ಪ್ರಸಂಗಗಳು ಉಂಟಾದರೆ ಅದರ ವಿರುದ್ಧ ದನಿ ಎತ್ತುವಂತಹ ಉದ್ದೇಶಗಳನ್ನು ಇಟ್ಟುಕೊಂಡು ನೂತನ ಸಂಘ ಅಸ್ತಿತ್ವಕ್ಕೆ ತರಲಾಗಿದೆ ಎಂದು ಪ್ರಮುಖರು ತಿಳಿಸಿದ್ದಾರೆ.
ಸಭೆಯಲ್ಲಿ ಕೂಟದ ಧ್ಯೇಯೋದ್ದೇಶಗಳು, ಬೈಲಾ ಇತ್ಯಾದಿಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭ ನೂತನ ಪದಾಧಿಕಾರಿ ಗಳನ್ನು ನೇಮಕ ಮಾಡಲಾಗಿದೆ. ಕೂಟದ ನೂತನ ಅಧ್ಯಕ್ಷರಾಗಿ ಕೊಟ್ಟಂಗಡ ವಿಜು ದೇವಯ್ಯ, ಕಾರ್ಯದರ್ಶಿಯಾಗಿ ಅಪ್ಪನೆರವಂಡ ಜಾನ್ಸಿ ಕಿರಣ್, ಖಜಾಂಚಿ ಹಾಗೂ ಕಾನೂನು ಸಲಹೆಗಾರ್ತಿಯಾಗಿ ನೆಲ್ಲಮಕ್ಕಡ ಪ್ರತಿಷ್ಠ ಮಾದಯ್ಯ, ಸ್ಥಾಪಕ ನಿರ್ದೇಶಕರುಗಳಾಗಿ ಹೊಟ್ಟೇಂಗಡ ತಾರಾ ವಿಶ್ವನಾಥ್, ಅಡ್ಡೇಂಗಡ ಸವಿತಾ ನಂಜಪ್ಪ ಅವರುಗಳನ್ನು ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಯಿತು. ಆರಂಭಿಕ ಸಭೆಯಲ್ಲಿ ಕೂಟದ 70 ಸದಸ್ಯೆಯರು ಪಾಲ್ಗೊಂಡಿದ್ದರು.