ಕೂಡಿಗೆ, ಅ. 23: ಕುಶಾಲನಗರ ತಾಲೂಕಾಗಿ ರಚನೆಗೊಂಡಿರುವ ಹಿನ್ನೆಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ಮೈಸೂರು ಕೊಡಗು ಸಂಪರ್ಕಕ್ಕೆ ಹೆಚ್ಚು ಅನುಕೂಲವಾಗುವಂತೆ ಕೂಡ್ಲೂರು ಕೈಗಾರಿಕಾ ಬಡಾವಣೆಯ ಸಮೀಪದಲ್ಲಿ ಹರಿಯುತ್ತಿರುವ ಕಾವೇರಿ ನದಿಗೆ ಶಾಶ್ವತ ಸೇತುವೆ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ತಿಳಿಸಿದ್ದಾರೆ.
ಅವರು ಕೈಗಾರಿಕಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ರಸ್ತೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು ಇದಕ್ಕೆ ಸಂಬಂಧಪಟ್ಟಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಕಾಮಗಾರಿಯ ನೀಲಿನಕ್ಷೆಯನ್ನು ತಯಾರಿಸಲು ಸೂಚಿಸಲಾಗಿದ್ದು, ಸದ್ಯದಲ್ಲೆ ಅಂದಾಜು ಮೊತ್ತ ತಿಳಿದ ನಂತರ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರದಲ್ಲಿ ಕಾಮಗಾರಿ ನಡೆಸಲು ಅನುಮೋದನೆ ಪಡೆದುಕೊಳ್ಳಲಾಗುವದು ಎಂದರು.
ಮೈಸೂರಿನಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸದ್ಯದಲ್ಲೇ ಪ್ರಾರಂಭಗೊಳ್ಳಲಿದೆ. ಅಲ್ಲದೆ, ಪಿರಿಯಾಪಟ್ಟಣ ತಾಲೂಕಿನ ಕೊಡಗು ಜಿಲ್ಲೆಯ ಸಮೀಪದಲ್ಲಿ ರೈಲ್ವೆ ನಿಲ್ದಾಣದ ಸಮೀಕ್ಷೆಯು ನಡೆದಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ಸಂಪರ್ಕಕ್ಕೆ ಅನುಕೂಲವಾಗುವಂತೆ ಕೂಡ್ಲೂರಿನ ಸಮೀಪ ಕಾವೇರಿ ನದಿಗೆ ಅಡ್ಡಲಾಗಿ ಶಾಶ್ವತ ಸೇತುವೆ ನಿರ್ಮಾಣ ಮಾಡುವದರಿಂದ ಜಿಲ್ಲೆಯ ಕೈಗಾರಿಕಾ ಕಾಫಿ ಘಟಕಗಳನ್ನು ಹೆಚ್ಚು ಹೊಂದಿರುವ ಕೂಡ್ಲೂರು ಕೈಗಾರಿಕಾ ಕಾಫಿ ಸಂಸ್ಕರಣಾ ಕೇಂದ್ರಗಳಿಂದ ಅಂತರರಾಷ್ಟ್ರೀಯ ಮಟ್ಟಕ್ಕೆ ಕಾಫಿಯನ್ನು ಕಳುಹಿಸಿಕೊಡಲು ಹೆಚ್ಚು ಅನುಕೂಲವಾಗುವದು. ಎಂದರು.