ಕಣಿವೆ, ಅ. 23: ಎಲ್ಲೆಂದರಲ್ಲಿ ಸ್ವಾಭಾವಿಕವಾಗಿ ಬೆಳೆದು ನಿಂತ ಶ್ರೀಗಂಧದ ಸಸ್ಯರಾಶಿ ಅರಣ್ಯ ಇಲಾಖೆಯ ಸೂಕ್ತ ನಿರ್ವಹಣೆ ಹಾಗೂ ರಕ್ಷಣೆಯಿಲ್ಲದೇ ಸೊರಗುತ್ತಿರುವ ಚಿತ್ರಣ ಕಣಿವೆಯಿಂದ ಭೈರಪ್ಪನಗುಡಿ ಬೆಟ್ಟದ ತಪ್ಪಲಿನವರೆಗೂ ಕಾಣಸಿಗುತ್ತಿದೆ. ಕುಶಾಲನಗರ ಹಾಗೂ ಶನಿವಾರಸಂತೆ ಮಾರ್ಗ ಮಧ್ಯೆ ಸಿಗುವ ಕಣಿವೆಯಿಂದ ಆರಂಭಗೊಂಡು ಸರಿ ಸುಮಾರು ಹತ್ತರಿಂದ ಹದಿನೈದು ಕಿಮೀ ದೂರದವರೆಗೂ ಅಮೂಲ್ಯವಾದ ಹಾಗೂ ಅಪೂರ್ವವಾದ ಶ್ರೀಗಂಧದ ಗಿಡ ಮರಗಳು ರಸ್ತೆ ಹೋಕರಿಗೆ ಕಾಣುತ್ತವೆ.

ಆದರೆ ಅವುಗಳಲ್ಲಿ ಹಲವು ಗಿಡಗಳು ಮರವಾಗುವ ಮೊದಲೇ ಬೆಳಗಾಗುವಷ್ಟರಲ್ಲಿ ಕಟುಕರ ಪಾಲಾಗುತ್ತಿವೆ. ಪಕ್ಷಿಗಳ ತ್ಯಾಜ್ಯಗಳಿಂದ ಇಡೀ ಬೆಟ್ಟ ಪ್ರದೇಶದ ಉದ್ದಕ್ಕೂ ಪಸರಿಸಿ ಹೇರಳವಾಗಿ ಬೆಳೆದು ನಿಂತಿರುವ ಶ್ರೀಗಂಧದ ಸಸ್ಯಗಳಿಗೆ ಅರಣ್ಯ ಇಲಾಖೆಯ ರಕ್ಷಣೆ ಅತೀ ತುರ್ತಾಗಿ ಬೇಕಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಯ ಹೆಸರಿನಲ್ಲಿ ಕೋಟ್ಯಂತರ ರೂ.ಗಳ ಅನುದಾನವನ್ನು ತಂದು ಪರಿಸರಕ್ಕೆ ಮಾರಕವಾದ ಕೇವಲ ವಾಣಿಜ್ಯ ಉದ್ದೇಶವನ್ನು ಧ್ಯೇಯವಾಗಿಟ್ಟು ಕೊಂಡು ಬೇರೆ ಬೇರೆ ಜಾತಿಯ ನೂರಾರು ಮರಗಳನ್ನು ಬೆಳೆಸುತ್ತಾರೆ. ಆದರೆ ಅವುಗಳು ಕೊಡುವ ಆದಾಯವನ್ನು ಸ್ವಾಭಾವಿಕವಾಗಿ ಬೆಳೆದು ನಿಂತ ಒಂದೇ ಒಂದು ಶ್ರೀಗಂಧದ ಮರ ಇಲಾಖೆಗೆ ತಂದುಕೊಡಬಲ್ಲದು.

ಆದರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಶ್ರಮರಹಿತವಾದ ಸಮಯಕ್ಕಷ್ಟೇ ಮೀಸಲಾದ ಸಂಬಳ ಬೇಕಿದೆ ಹೊರತು ಪ್ರಾಮಾಣಿಕವಾದ ನಿಸರ್ಗವನ್ನು ಉಳಿಸುವ ಮತ್ತು ಶ್ರೀಗಂಧದ ಗಿಡಗಳನ್ನು ಬೆಳೆಸಿ ಇಲಾಖೆಗೆ ಆದಾಯ ಮಾಡಿಕೊಡುವ ಹೆಚ್ಚಿನ ಸೇವೆಯ ಕೊರತೆ ಎದ್ದು ಕಾಣುತ್ತಿದೆ. ಈ ಪ್ರದೇಶದಲ್ಲಿ ಶ್ರೀಗಂಧದ ಸಸ್ಯಗಳ ರಾಶಿ ನೆನ್ನೆ ಮೊನ್ನೆಯಿಂದಲ್ಲ. ಅವುಗಳು ಕಳೆದ ಎರಡು ದಶಕಗಳಿಂದಲೂ ಇಲ್ಲಿ ಕಾಣುತ್ತಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈಗಲೂ ಮನಸು ಮಾಡಿದರೆ ಈ ಬೆಟ್ಟದ ತಪ್ಪಲು ಪ್ರದೇಶವನ್ನು ಶ್ರೀಗಂಧದ ಮೀಸಲು ಪ್ರದೇಶವಾಗಿ ಘೋಷಿಸಿದರೆ ಸ್ವಾಭಾವಿಕವಾಗಿ ಬೆಳೆದು ನಿಂತಿರುವ ಈ ಸಸ್ಯರಾಶಿಯನ್ನು ಸಂರಕ್ಷಣೆ ಮಾಡಬಹುದಾಗಿದೆ.

ಒಂದು ಎಕರೆ ಪ್ರದೇಶದಲ್ಲಿ ಇಲ್ಲಿ ಕಾಣ ಸಿಗುವ ಶ್ರೀಗಂಧದ ಸಸ್ಯಗಳನ್ನು ಉಳಿಸಿ ಬೆಳೆಸಿದಲ್ಲಿ ಮುಂದಿನ 15 ರಿಂದ 20 ವರ್ಷಗಳಲ್ಲಿ ಕೇವಲ ಒಂದು ಎಕರೆ ಪ್ರದೇಶದಲ್ಲಿ ಕನಿಷ್ಟ ಎಂದರೂ 4 ರಿಂದ 5 ಕೋಟಿ ಆದಾಯವನ್ನು ಗಳಿಸಬಹುದಾಗಿದೆ. ಇದೇ ರೀತಿ ಕಣಿವೆ ಗ್ರಾಮದಿಂದ ಭೈರಪ್ಪನಗುಡಿವರೆಗೂ ಇರುವ ನೂರಾರು ಎಕರೆ ವಿಸ್ತೀರ್ಣದಲ್ಲಿ ನೂರಾರು ಕೋಟಿ ರೂ.ಗಳ ಆದಾಯವನ್ನು ಗಳಿಸುವ ಬೃಹತ್ತಾದ ಯೋಜನೆಯನ್ನು ರೂಪಿಸಿ ಶ್ರೀಗಂಧದ ನಾಡು ಎಂಬ ಕರುನಾಡಿಗೆ ಕೊಡಗು ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಮಾದರಿಯಾಗ ಬಹುದು ಎನ್ನುತ್ತಾರೆ ಪರಿಸರ ಪ್ರೇಮಿ ಹಾಗೂ ಸಾಹಿತಿ ಕಣಿವೆಯ ಭಾರದ್ವಾಜ್ ಆನಂದ ತೀರ್ಥ.

ದನಗಾಹಿಗಳ ಪಾಲು: ಯಾರೂ ಕೂಡ ಒಂದೇ ಒಂದು ಗಿಡವನ್ನೂ ಕೂಡ ನೆಟ್ಟು ಬೆಳೆಸಿಲ್ಲದ ಶ್ರೀಗಂಧದ ಸಸ್ಯರಾಶಿಗಳನ್ನು ಪ್ರಕೃತಿಯೇ ತನ್ನ ಮಡಿಲಲ್ಲಿ ಆವಾಹಿಸಿಕೊಂಡು ಪೋಷಿಸಿದೆ. ಆದರೆ ನಿಸರ್ಗದತ್ತವಾಗಿ ಬೆಳೆದು ನಿಂತ ಶ್ರೀಗಂಧದ ಗಿಡಗಳಿಗೆ ಅವು ಬಲಿಯುವ ಮುನ್ನವೇ ದುಷ್ಕರ್ಮಿಗಳು ಕೊಡಲಿ ಏಟು ಕೊಟ್ಟರೇ, ಕೆಲವು ದನಗಾಹಿಗಳು ತಮ್ಮ ಮನೆಗೆ ಉರುವಲಾಗಿ ಬಳಸಲು ಈ ಅಪೂರ್ವ ಸಸ್ಯರಾಶಿಯ ಬುಡಕ್ಕೆ ಕೊಡಲಿ ಇಟ್ಟು ಕೆಳಗುರುಳಿಸಿ ವಾರದ ನಂತರ ಒಣಗಿದ ಮೇಲೆ ಮನೆಗೆ ಕೊಂಡೊಯ್ಯುವ ಪರಿಪಾಟಲು ಇಲ್ಲಿ ನಿರಂತರವಾಗಿದೆ.

ಸ್ಥಳೀಯರಿಗೆ ಶ್ರೀಗಂಧದ ವನಸಂಪತ್ತಿನ ಪ್ರಾಮುಖ್ಯತೆ ಹಾಗೂ ವಿಶೇಷತೆಯ ಬಗ್ಗೆ ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಅರಣ್ಯ ಇಲಾಖೆಯ ಸಿಬ್ಬಂದಿಗಳು ಜನ ಜಾಗೃತಿ ಮೂಡಿಸುವ ಮೂಲಕವು ಈ ಶ್ರೀಗಂಧವನ್ನು ಸಂರಕ್ಷಿಸಬಹುದಾಗಿದೆ.

ಖಾಸಗಿಯವರಿಗೆ ಹೆಚ್ಚು ಲಾಭ: ಇಲ್ಲಿ ಶ್ರೀಗಂಧದ ಗಿಡಗಳು ಹುಲುಸಾಗಿ ಬೆಳೆಯಲು ಉತ್ತಮ ಹವಾಮಾನವೂ ಕೂಡ ಕಾರಣವಾಗಿದ್ದು ಅರಣ್ಯ ಇಲಾಖೆಯ ಜಾಗವಲ್ಲದೇ ಖಾಸಗಿ ಜಮೀನಿನಲ್ಲೂ ಹೇರಳವಾಗಿ ಬೆಳೆದು ನಿಂತಿರುವ ಕಾರಣ ಅರಣ್ಯ ಇಲಾಖೆ ಅಂತಹ ಖಾಸಗಿ ಜಮೀನಿನ ರೈತರನ್ನು ಗುರುತಿಸಿ ಅವರಿಗೆ ಪ್ರೇರೇಪಿಸಿ ಸೂಕ್ತ ರಕ್ಷಣೆಯ ಅರಿವು ಮೂಡಿಸುವ ಕೆಲಸವೂ ಇಲ್ಲಿ ಆಗಬೇಕಿದೆ. ಪರಾವಲಂಬಿ ಗಿಡವಾದ ಶ್ರೀಗಂಧ ಭೂಮಿಯಿಂದ ತನಗೆ ಬೇಕಾದ ನೀರು ಹಾಗೂ ಗೊಬ್ಬರವನ್ನು ಬೇರುಗಳ ಮೂಲಕ ಹೀರಲು ಸತ್ವವನ್ನು ಕಳೆದುಕೊಂಡಿರುತ್ತವೆ ಎಂದು ಹೇಳಲಾಗಿದ್ದು, ಇತರೆ ಪರಾವಲಂಬಿ ಸಸ್ಯರಾಶಿಗಳನ್ನು ಅವಲಂಬಿಸಿರುತ್ತವೆ.

ರೈತರು ತಮ್ಮ ಜಮೀನಿನಲ್ಲಿ ಕೇವಲ ಶ್ರೀಗಂಧ ಹಾಗೂ ಇತರ ಪರಾವಲಂಬಿ ಗಿಡಗಳಾದ ಹೆಬ್ಬೇವು, ಮಾವು ಮೊದಲಾದವಗಳನ್ನು ಬೆಳೆಸಿ ಹತ್ತಾರು ವರ್ಷ ಆರೈಕೆ ಮಾಡಿದರೆ ನೂರಾರು ವರ್ಷ ಕುಳಿತು ತಿನ್ನುವಷ್ಟು ಆದಾಯವನ್ನು ಗಳಿಸಬಹುದಾಗಿದೆ. ಶ್ರೀಗಂಧದ ಎಣ್ಣೆಯನ್ನು ಪಡೆಯಲು ಸೋಪ್ಸ್ ಮತ್ತು ಡಿಟರ್ಜೆಂಟ್ ಕಂಪೆನಿಗಳೇ ತಮ್ಮ ಮನೆ ಬಾಗಿಲಿಗೆ ಬರುತ್ತವೆ. ಬೆಳೆದು ನಿಂತ ಶ್ರೀಗಂಧದ ಮರಗಳನ್ನು ರಕ್ಷಿಸಲು ಇಲಾಖೆಯೂ ಒಂದಷ್ಟು ಸಹಕಾರ ನೀಡುತ್ತದೆ. ರಿಯಾಯಿತಿ ದರದಲ್ಲಿ ಸೋಲಾರ್ ಅಥವಾ ವಿದ್ಯುತ್ ತಂತಿ ಬೇಲಿ ಅಳವಡಿಸುವ, ಕೋವಿ ಹಕ್ಕು ಹೊಂದುವ ಹೀಗೆ ಅವುಗಳ ರಕ್ಷಣೆಗೆ ಬೇಕಾದ ಎಲ್ಲ ಅನುಕೂಲವನ್ನು ಇಲಾಖೆ ಇತ್ತೀಚಿನ ದಿನಗಳಲ್ಲಿ ಮಾಡುತ್ತಿದೆ. ಇದರ ಸದುಪಯೋಗ ರೈತರು ಪಡೆಯಬೇಕಿದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಶ್ರೀಗಂಧದ ಮರಗಳಿಗೆ ಚಿಪ್ ಅಳವಡಿಸುವ ತಂತ್ರಾಂಶವೂ ಜಾರಿಯಲ್ಲಿದೆ. ಕಳ್ಳರು ಮರಕ್ಕೆ ಕೊಡಲಿ ಹಾಕಿದಾಕ್ಷಣ ಸಮೀಪದ ಪೋಲಿಸ್ ಠಾಣೆಗೆ ಅಥವಾ ಜಮೀನಿನ ಮಾಲೀಕನಿಗೆ ಮೆಸೇಜ್ ರವಾನೆಯಾಗುತ್ತದೆ. ಒಟ್ಟಾರೆ ಶ್ರೀಗಂಧದ ಗಿಡಗಳ ವನವಾಗಿ ಮಾಡಲು ಅರಣ್ಯ ಇಲಾಖೆ ಇನ್ನಾದರೂ ಕ್ರಮಕೈಗೊಳ್ಳಬೇಕಿದೆ.

-ಕೆ.ಎಸ್. ಮೂರ್ತಿ