ಗೋಣಿಕೊಪ್ಪ ವರದಿ, ಅ. 22: ಮತದಾರರ ಪಟ್ಟಿಯಲ್ಲಿನ ಪರಿಷ್ಕರಣೆಗೆ ನವೆಂಬರ್ 18 ಕೊನೆಯ ದಿನಾಂಕ ಎಂದು ಪ್ರಕಟಿಸಿದ್ದು, ಸಾಕಷ್ಟು ಜನರು ಪಡಿತರ ಚೀಟಿ ಮತ್ತು ಆಧಾರ್ ಚೀಟಿ ದಾಖಲೆಗಳಿಲ್ಲದೆ ಮತದಾರರ ಪಟ್ಟಿಯಿಂದ ವಂಚಿತರಾಗಲಿದ್ದಾರೆ. ಇದರಿಂದ ಮೂಲ ದಾಖಲಾತಿ ಒದಗಿಸಲು ಜಿಲ್ಲಾಧಿಕಾರಿ ತಕ್ಷಣ ಯೋಜನೆ ಜಾರಿ ಮಾಡಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಆಧಾರ್, ಪಡಿತರ ಚೀಟಿ ನೋಂದಣಿಗೆ ಮೊಬೈಲ್ ಸೇವೆ ರೂಪಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಾಕಷ್ಟು ಮತದಾರರು ಇದರಿಂದ ಮತದಾನದಿಂದ ವಂಚಿತರಾಗುವದನ್ನು ತಡೆಯಲು ಸಾಧ್ಯವಿದೆ. ಪರಿಷ್ಕರಣೆ ದಿನಾಂಕ ಮುಂದೂಡಬೇಕು. ಇಂತಹ ದಾಖಲಾತಿ ಇಲ್ಲದಿದ್ದರೆ ಸರ್ಕಾರದ ಸಾಕಷ್ಟು ಯೋಜನೆಗಳು ದೊರೆಯುವದಿಲ್ಲ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳಲಾಗುವದು ಎಂದು ತಿಳಿಸಿದರು.
ಸಮಿತಿ ಕಾರ್ಯಾಧ್ಯಕ್ಷ ಬಾಚೀರ ಕಾರ್ಯಪ್ಪ ಮಾತನಾಡಿ, ಮಡಿಕೇರಿ ಆರ್‍ಟಿಒ ಕಚೇರಿಯಲ್ಲಿ ಮದ್ಯವರ್ತಿ ಗಳ ಹಾವಳಿ ನಡೆಯಲು ಲೋಕಾಯುಕ್ತಕ್ಕೆ ಸಮಿತಿಯಿಂದ ಸಲ್ಲಿಸಿದ್ದ ಮನವಿಗೆ ಸೂಕ್ತ ಸ್ಪಂದನೆ ದೊರೆತಿದೆ. ಹಾವಳಿ ಕಡಿಮೆ ಯಾಗಿದ್ದು, ಸಂಪೂರ್ಣ ನಿಯಂತ್ರಣಕ್ಕೆ ಆಗ್ರಹಿಸುತ್ತೇವೆ ಎಂದರು.
ಗೃಹ ನಿರ್ಮಾಣಕ್ಕೆ ಸಾಕಷ್ಟು ಕಡತಗಳು ಪರಿವರ್ತನೆಗಾಗಿ ತಾಲೂಕು ಕಚೇರಿಯಲ್ಲಿ ಹಾಗೇ ಉಳಿದುಕೊಂಡಿದೆ ಎಂಬ ದೂರುಗಳಿವೆ. ಕಡತ ವಿಲೇವಾರಿ ಯಲ್ಲಿ ಸಮಸ್ಯೆಗಳನ್ನು ಅನುಭವಿಸುವ ಸಾರ್ವಜನಿಕರು ಸಮಿತಿಗೆ ದೂರು ನೀಡಿದಲ್ಲಿ ಕಡತ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಸಮಿತಿ ಕ್ರಮಕೈಗೊಳ್ಳಲಿದೆ. ಜನರ ಪರವಾಗಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ಹೋರಾಟಕ್ಕೆ ಇಳಿಯಲಿದೆ. ಸಾರ್ವಜನಿಕರು 9480389057, 9449627538 ಸಂಪರ್ಕಿಸುವಂತೆ ಮನವಿ ಮಾಡಿದರು. ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ ಇದ್ದರು. ಗೋಷ್ಠಿಯಲ್ಲಿ ಜಂಟಿ ಕಾರ್ಯದರ್ಶಿ ಬಾಚಮಾಡ ನಮಿತಾ ಪೂಣಚ್ಚ ಉಪಸ್ಥಿತರಿದ್ದರು.