ಮಡಿಕೇರಿ, ಅ. 22: ಕಾಫಿ ತೋಟ ವೊಂದರಿಂದ ಮಾಲೀಕ ರಿಗೆ ಅರಿವಿಲ್ಲ ದಂತೆ ಬೀಟಿ ಮರ ಕಳ್ಳತನಕ್ಕೆ ಪ್ರಯತ್ನ ನಡೆಸಿದ ಪ್ರಕರಣವೊಂದನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ಪತ್ತೆ ಹಚ್ಚಿ ಮರವನ್ನು ವಶಪಡಿಸಿಕೊಂಡಿದ್ದಾರೆ. ಮೂರ್ನಾಡು ಎಸ್. ಕಟ್ಟೆಮಾಡುವಿನ ಸಾದೆರ ಮೊಣ್ಣಪ್ಪ ಅವರ ತೋಟದಿಂದ ರೂ. 1.50 ಲಕ್ಷ ಮೌಲ್ಯದ ಬೀಟಿ ಮರವನ್ನು ಕಡಿದು 12 ನಾಟಾಗಳಾಗಿ ಪರಿವರ್ತಿಸಲಾಗಿತ್ತು. ಈ ಬಗ್ಗೆ ದೊರೆತ ಮಾಹಿತಿಯನ್ವಯ ದಾಳಿ ನಡೆಸಿದ ಮಡಿಕೇರಿ ವಲಯ ಅರಣ್ಯ ಇಲಾಖಾ ಸಿಬ್ಬಂದಿಗಳು ಮರವನ್ನು ವಶಪಡಿಸಿಕೊಂಡಿದ್ದಾರೆ.
ಎಸ್.ಬಿ. ಚಿಣ್ಣಪ್ಪ, ಜಮ್ಸಿ ತಿಮ್ಮಯ್ಯ, ಬಿ. ಕುಶಾಲಪ್ಪ ಹಾಗೂ ಇತರರು ಆರೋಪಿಗಳಾಗಿದ್ದು, ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿ.ಎಫ್.ಓ. ಪ್ರಭಾಕರ್, ಎಸಿಎಫ್ ನೀಲೇಶ್, ಆರ್ಎಫ್ಓ ಜಗದೀಶ್ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಕೆ.ಎಂ. ದೇವಯ್ಯ ಹಾಗೂ ಅರಣ್ಯ ವೀಕ್ಷಕ ಶರತ್ ಕುಮಾರ್ ಕಾರ್ಯಾಚರಣೆ ನಡೆಸಿದ್ದಾರೆ.