ಸೋಮವಾರಪೇಟೆ,ಅ.22: ಕಳೆದ ತಾ.20ರಂದು ಸಂಜೆ 7.50ಕ್ಕೆ ಪಟ್ಟಣ ಸಮೀಪದ ಕಾನ್ವೆಂಟ್ ಬಾಣೆ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಗುಂಡಿನ ಧಾಳಿ ಮಾಡಿದ ಆರೋಪಿ ಇಂದು ಪೊಲೀಸರಿಗೆ ಶರಣಾಗಿದ್ದಾನೆ.
ಕಾನ್ವೆಂಟ್ ಬಾಣೆಯ ನಿವಾಸಿ, ಭೋವಿ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಜಿತ್ ಎಂಬಾತನ ಮೇಲೆ ಅದೇ ಗ್ರಾಮದ ಗಣಪತಿ ಎಂಬಾತ ಗುಂಡು ಹಾರಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದ. ಘಟನೆ ನಡೆದ ನಂತರ ಆರೋಪಿ ಗಣಪತಿ ಪರಾರಿಯಾಗಿದ್ದು, ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಶರಣಾಗಿದ್ದಾನೆ.
ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಡಿವೈಎಸ್ ಪಿ ಮುರುಳೀಧರ್, ವೃತ್ತ ನಿರೀಕ್ಷಕ ನಂಜುಂಡೇಗೌಡ ಸಮಕ್ಷಮ ದಲ್ಲಿ ಬಂದೂಕು ಸಹಿತ ಆರೋಪಿ ಗಣಪತಿ ಶರಣಾಗಿದ್ದಾನೆ. ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಸ್ಥಳ ಮಹಜರು, ಕೋವಿ ವಶದ ನಂತರ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವದು ಎಂದು ಮೂಲಗಳು ತಿಳಿಸಿವೆ.
ಗಾಯಾಳು ಸುಜಿತನ ದೇಹದೊಳಗೆ 11 ಚಿಲ್ಗಳು ಸೇರಿದ್ದು, ಮಡಿಕೇರಿಯಲ್ಲಿ 6ರನ್ನು ಹೊರತೆಗೆ ಯಲಾಗಿದೆ. ಉಳಿದ 5 ಚಿಲ್ಗಳನ್ನು ಹೊರತೆಗೆಯಲು ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗಾಯಾಳು ಚೇತರಿಸಿಕೊಳ್ಳುತ್ತಿದ್ದಾನೆ.
ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ತಾ. 23ರಂದು ದೇಹದೊಳಗಿರುವ 5 ಗುಂಡುಗಳನ್ನು ಹೊರತೆಗೆಯಲು ವೈದ್ಯರು ಸಿದ್ಧತೆ ನಡೆಸಿದ್ದಾರೆ ಎಂದು ಸುಜಿತ್ನ ಕುಟುಂಬಸ್ಥರು ತಿಳಿಸಿದ್ದಾರೆ.