ಮಡಿಕೇರಿ, ಅ. 22: ದೀಪಾವಳಿ ಹಬ್ಬದ ಸಂದರ್ಭ ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳು ಹಾಗೂ ಮಾಲಿನ್ಯದ ದುಷ್ಪರಿಣಾಮಗಳ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಲ್ಲಿ ಪರಿಸರ ಜಾಗೃತಿ ಮೂಡಿಸುವ ದಿಸೆಯಲ್ಲಿ ತಾ. 24 ರಂದು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ರಾಷ್ಡ್ರೀಯ ಹಸಿರು ಪಡೆಯ ಇಕೋ ಕ್ಲಬ್‍ಗಳ ಆಶ್ರಯದಲ್ಲಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತಂತೆ ಪರಿಸರ ಜಾಗೃತಿ ಆಂದೋಲನ ನಡೆಯಲಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ರಾಷ್ಟ್ರೀಯ ಹಸಿರು ಪಡೆಯ ಪರಿಸರ ಕಾರ್ಯಕ್ರಮದಡಿ ಅಂದು ಶಾಲೆಗಳಲ್ಲಿ ಬೆಳಿಗ್ಗೆ 9.45 ಗಂಟೆಗೆ ಪ್ರಾರ್ಥನಾ ಸಮಯದಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಸಂಬಂಧಿಸಿದಂತೆ ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳ ಬಗ್ಗೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ನಾಗರಿಕರಲ್ಲಿ ಅರಿವು ಮೂಡಿಸಲು ಕ್ರಮ ವಹಿಸುವಂತೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ ತಿಳಿಸಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಡಗು ಪ್ರಾದೇಶಿಕ ಕಚೇರಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್‍ಗಳು ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಈ ಜಾಗೃತಿ ಆಂದೋಲನದ ಅಂಗವಾಗಿ ತಾ. 23 ರಂದು ಬೆಳಿಗ್ಗೆ 9.45 ಗಂಟೆಗೆ ಮಡಿಕೇರಿ ನಗರದ ಸಂತ ಮೈಕಲರ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಕುರಿತಂತೆ ಪರಿಸರ ಜಾಗೃತಿ ಆಂದೋಲನ ಸಂಘಟಿಸಲಾಗಿದೆ.