ಕಣಿವೆ, ಅ. 22: ಒಂದೆಡೆ ಕಾಡಾನೆಗಳ ಹಾವಳಿಯಿಂದಾಗಿ ದಾರಿ ಕಾಣದೇ ನಿತ್ಯವೂ ಪಟಾಕಿ ಸಿಡಿಸಿ ಕಾಡಾನೆಗಳನ್ನು ಕಾಡಿಗಟ್ಟುವ ದುಸ್ಸಾಹಸ, ಮತ್ತೊಂದೆಡೆ ಊರ ಮಗ್ಗುಲಲ್ಲೇ ನಡೆಸುತ್ತಿರುವ ಗಣಿಗಾರಿಕೆಯ ಗಣಿ ಸಾಗಾಟದ ಲಾರಿಗಳ ಸಂಚಾರದಿಂದ ಕಿತ್ತು ನಿಂತಿರುವ ಮುಖ್ಯ ರಸ್ತೆ, ಅಲ್ಲಿ ಹಿಂಡು ಹಿಂಡು ಕಾಡಾನೆಗಳು ಓಡಾಡಿ ಕೆಸರೆಬ್ಬಿಸಿರುವ ಗ್ರಾಮೀಣ ರಸ್ತೆಗಳು.... ಕಾಡಾನೆಗಳು ತಿಂದು ತುಳಿದು (ಮೊದಲ ಪುಟದಿಂದ) ನಿರ್ನಾಮವಾಗಿರುವ ರೈತರು ಬೆಳೆದ ಅಪಾರ ಕೃಷಿ ಫಸಲು......ಇನ್ನು ಬೆಳೆದ ಬೆಳೆಗಳು ನಿರ್ನಾಮಗೊಳ್ಳದಂತೆ ತಡೆಯಲು ಮರಗಳ ಮೇಲೆ ನಿರ್ಮಾಣಗೊಂಡಿರುವ ಆನೆ ಕಾಯುವ ಶೆಡ್ಗಳು...... ಇದು ಕಂಡು ಬಂದಿದ್ದು ಇಲ್ಲಿಗೆ ಸಮೀಪದ ಏಲಕ್ಕನೂರು ಹಾಗೂ ಹೊಸಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಗ್ರಾಮದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.
ಸುಮಾರು 60 ರಿಂದ 70 ಸಂಖ್ಯೆಯಲ್ಲಿ ಇವೆ ಎನ್ನಲಾದ ಕಾಡಾನೆಗಳ ಹಿಂಡು ಬೇರೆ ಬೇರೆ ರೀತಿಯಲ್ಲಿ ತಂಡೋಪತಂಡವಾಗಿ ರೈತರ ಜಮೀನುಗಳಿಗೆ, ಹೊಲ - ಗದ್ದೆ ತೋಟಗಳಿಗೆ ಲಗ್ಗೆ ಇಡುತ್ತಿದ್ದು ಇಲ್ಲಿನ ರೈತರು ರಾತ್ರಿಗಳನ್ನು ಸಂಕಟದಿಂದ ಕಳೆಯುತ್ತಿದ್ದಾರೆ. ಒಂದು ರೀತಿಯಲ್ಲಿ ಪ್ರತೀ ರಾತ್ರಿಗಳನ್ನು ದೀಪಾವಳಿ ಮಾದರಿಯಲ್ಲಿ ಪಟಾಕಿ ಸಿಡಿಸಿ, ದೂರದಲ್ಲಿ ಎಲ್ಲೊ ಸದ್ದು ಮಾಡಿಕೊಂಡು ಬರುವ ಕಾಡಾನೆಗಳನ್ನು ಮರಳಿ ಕಾಡಿಗಟ್ಟುವ ಹರ ಸಾಹಸದಲ್ಲಿ ದಿನ ಕÀಳೆಯುತ್ತಿದ್ದಾರೆ. ಗ್ರಾಮಕ್ಕೆ ತೆರಳಿದ್ದ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಗ್ರಾಮದ ಅನೇಕ ರೈತರು, ಗ್ರಾಮದ ಸುತ್ತಲೂ ಇರುವ ಅರಣ್ಯದಿಂದಾಗಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ.
ಗ್ರಾಮದ ಸರಹದ್ದಿನ ಅರಣ್ಯದ ಸುತ್ತ ಕಾಡಾನೆಗಳು ನಾಡಿಗೆ ಬಾರದಂತೆ ಶಾಶ್ವತವಾದ ಸೋಲಾರ್ ಬೇಲಿ ಅಥವಾ ಆನೆ ಕಂದಕವನ್ನು ನಿರ್ಮಿಸುವಲ್ಲಿ ಅರಣ್ಯ ಇಲಾಖೆ ಪ್ರತೀ ವರ್ಷವೂ ವಿಫಲವಾಗುತ್ತಿದೆ. ಜನರಿಗೆ ನೆರವಾಗಿ ಸೌಲಭ್ಯಗಳನ್ನು ಕಲ್ಪಿಸಿ ವರವಾಗಬೇಕಾದ ಜನಪ್ರತಿನಿಧಿಗಳು ಕೂಡ ತಮ್ಮ ಜವಾಬ್ದಾರಿ ಅರಿಯುತ್ತಿಲ್ಲ. ಹಗಲಿಡೀ ಜಮೀನಿನಲ್ಲಿ ಬೆವರು ಹರಿಸಿ ದುಡಿಯುವ ನಾವುಗಳು, ಬೆಳೆದ ಬೆಳೆಗಳು ಕಾಡಾನೆಗಳ ಪಾಲಾಗದಂತೆ ರಾತ್ರಿಯಿಡೀ ಕಾವಲು ಕಾಯುತ್ತೇವೆ. ಪ್ರಾಣ ರಕ್ಷಣೆಗಾಗಿ ನಮ್ಮ ನಮ್ಮ ಜಮೀನುಗಳಲ್ಲಿನ ಮರಗಳ ರೆಂಬೆಗಳ ಮೇಲೆ ಗುಡಿಸಲು ಮಾದರಿಯ ಶೆಡ್ ನಿರ್ಮಿಸಿ ಅದರೊಳಗೆ ಮಳೆ ಗಾಳಿ ಲೆಕ್ಕಿಸದೇ ರಾತ್ರಿಯಿಡೀ ಎಚ್ಚರವಿದ್ದು ಕಾಡಾನೆಗಳಿಂದ ಬೆಳೆಗಳ ರಕ್ಷಣೆ ಮಾಡುವ ದುಸ್ಸಾಹಸ ಮಾಡುತ್ತೇವೆ. ಈ ನಡುವೆ ತುಂಬಾ ಆಯಾಸದಿಂದಾಗಿ ಏನಾದರೂ ಕೆಲಕ್ಷಣ ಕಣ್ಣು ನಿದ್ರೆಗೆ ಜಾರಿದರೆ ಆನೆಗಳ ಹಿಂಡು ದಾಳಿಯಿಟ್ಟು ಕ್ಷಣಾರ್ಧದಲ್ಲಿ ಕೈಗೆ ಬಂದ ಬೆಳೆ ಬಾಯಿಗೆ ಬರದಂತೆ ಹಾನಿ ಮಾಡುತ್ತವೆ ಎಂದು ಹೇಳುವಾಗ ರೈತರ ಕಣ್ಣಂಚುಗಳು ಒದ್ದೆಯಾದವು. ಅಪಾರ ಹಣ ವ್ಯಯಿಸಿ ಬೆಳೆದ ಶುಂಠಿ ಫಸಲು, ಕ್ಯಾನೆ, ಸುವರ್ಣ ಗೆಡ್ಡೆ, ಸಿಹಿ ಗೆಣಸು, ಜೋಳ, ಭತ್ತ, ಬಾಳೆ, ಬದನೆ ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಬೆಳೆಗಳು ಕಾಡಾನೆಗಳ ಹಿಂಡಿಗೆ ಸಿಲುಕಿ ನಾಶವಾಗುತ್ತಿವೆ. ಗ್ರಾಮದ ರವಿ, ಹರೀಶ್, ರಾಜು ಎಂಬವರಿಗೆ ಸೇರಿದ ಕಾಫಿ, ಮಲ್ಲಿಕಾರ್ಜುನ, ನಾಗರಾಜು, ಪ್ರದೀಪ್, ಚಂದ್ರಶೇಖರ್ ಮೊದಲಾದವರಿಗೆ ಸೇರಿದ ಜೋಳ ಹಾಗೂ ಗೆಣಸು, ಸಂತೋಷ್, ಪುಟ್ಟಸ್ವಾಮಯ್ಯ, ಕುಮಾರ, ಬಸವರಾಜು ಎಂಬವರಿಗೆ ಸೇರಿದ ಬಾಳೆ, ಭತ್ತ, ತೆಂಗು ಮೊದಲಾದ ಬೆಳೆಗಳು ಕಾಡಾನೆಗಳ ಪಾಲಾಗಿವೆ.
ಗ್ರಾಮದಲ್ಲಿ ಮಿತಿ ಮೀರಿರುವ ಕಾಡಾನೆಗಳ ಹಾವಳಿಯಿಂದ ನಷ್ಟಕ್ಕೆ ಸಿಲುಕಿರುವ ರೈತರಿಗೆ ಕೂಡಲೇ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಇನ್ನು ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ದಿನಂಪ್ರತೀ ಗ್ರಾಮದಲ್ಲಿ ಕಲ್ಲು ಸಾಗಿಸುವ ನೂರಾರು ಸಂಖ್ಯೆಯ ಲಾರಿಗಳಿಂದಾಗಿ ಕಿತ್ತು ನಿಂತ ರಸ್ತೆಯನ್ನು ಸರಿಪಡಿಸಬೇಕು. ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಾರಿಗೆ ಬಸ್ ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮದ ನಿವಾಸಿಗಳು ಜಿಲ್ಲಾಡಳಿತ ವನ್ನು ಆಗ್ರಹಿಸಿದ್ದಾರೆ.
-ಕೆ.ಎಸ್. ಮೂರ್ತಿ