ಸುಂಟಿಕೊಪ್ಪ, ಅ. 22: ಮಾನವನ ಅಂಗಗಳಲ್ಲಿ ಅತೀ ಪ್ರಾಮುಖ್ಯವಾದ ಹಾಗೂ ಸೂಕ್ಷ್ಮ ವಾದ ಅಂಗ ಕಣ್ಣು ಆಗಿದ್ದು, ಅದರ ರಕ್ಷಣೆ ಮಾಡುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಡಾ. ಪ್ರಶಾಂತ್ ಹೇಳಿದರು.
ಶ್ರೀಮತಿ ಡಿ.ಚೆನ್ನಮ್ಮ ಪದವಿಪೂರ್ವ ಕಾಲೇಜಿನ ವತಿಯಿಂದ ಕಾನ್‍ಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿ ರುವ ಎನ್‍ಎಸ್‍ಎಸ್ ವಾರ್ಷಿಕ ಶಿಬಿರದಲ್ಲಿ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಶಿಬಿರಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಉಚಿತ ನೇತ್ರ ತಪಾಸಣೆ ನಡೆಯಿತು.
ಬಳಿಕ ಮಾತನಾಡಿದ ಮಡಿಕೇರಿಯ ನೇತ್ರ ತಜ್ಞ ಡಾ. ಪ್ರಶಾಂತ್, ಪ್ರತಿಯೊಬ್ಬರೂ ಕಣ್ಣಿನ ಆರೋಗ್ಯದ ಬಗ್ಗೆ ಗಮನಹರಿಸಬೇಕು. ಕಣ್ಣಿನಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೂ ನೇರವಾಗಿ ವೈದ್ಯರನ್ನು ಸಂಪರ್ಕಿಸ ಬೇಕೇ ಹೊರತು ಸಿಕ್ಕಿದ ಔಷಧಿಗಳನ್ನು ಹಾಕಬಾರದು. ನೇತ್ರದಾನ ಪವಿತ್ರ ವಾದದ್ದು. ಆ ನಿಟ್ಟಿನಲ್ಲಿ ಎಲ್ಲರೂ ಕಣ್ಣಿನ ಬಗ್ಗೆ ಜಾಗರೂಕರಾಗಿರಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಗದೀಶ್ ಅವರು, ಈ ಶಿಕ್ಷಣ ಸಂಸ್ಥೆಯು ಆಯೋಜಿಸುವ ಎನ್‍ಎಸ್‍ಎಸ್ ವಾರ್ಷಿಕ ಶಿಬಿರದೊಂದಿಗೆ 9 ವರ್ಷಗಳ ನಿರಂತರ ಸೇವೆ ನಮ್ಮ ಸಂಸ್ಥೆಯದಾಗಿದ್ದು, ಇದರಿಂದ ಬಹಳಷ್ಟು ಮಂದಿಗೆ ಸಹಾಯವಾಗಿದೆ ಎಂಬ ಸಂತೋಷ ನಮ್ಮದು. ಈ ಶಿಬಿರದ ಮೂಲಕ ಉಚಿತ ಕನ್ನಡಕ, ಕಣ್ಣಿನ ಔಷಧಿಗಳು ಹಾಗೂ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ನಮ್ಮಿಂದಾದ ಸಣ್ಣ ಸೇವೆ ಯನ್ನು ಸಮಾಜಕ್ಕೆ ಮಾಡುತ್ತಿದ್ದೇವೆ ಎಂದರು.
ಕಾನ್‍ಬೈಲ್ ತೋಟದ ವ್ಯವಸ್ಥಾಪಕ ಸಿ.ಜಿ. ಹೆಗ್ಗಡೆ, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಬಿ.ಇ. ಸತೀಶ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಡಿ. ಚೆನ್ನಮ್ಮ ಪ.ಪೂ. ಕಾಲೇಜಿನ ಉಪನ್ಯಾಸಕಿ ಸೀಮಾ ಮಂದಪ್ಪ ವಹಿಸಿದ್ದರು. ಈ ಶಿಬಿರದಲ್ಲಿ ಶಿಬಿರಾರ್ಥಿಗಳು ಮತ್ತು ಗ್ರಾಮಸ್ಥರು ಸೇರಿದಂತೆ 100 ಮಂದಿ ನೇತ್ರ ತಪಾಸಣೆ ಮಾಡಿಸಿಕೊಂಡರು.
ಶಿಬಿರಾರ್ಥಿಗಳಾದ ರಕ್ಷಿತಾ ಸ್ವಾಗತಿಸಿ, ಅಕ್ಷಿತಾ ವಂದಿಸಿ, ಶ್ರೀಜಾ ನಿರೂಪಿಸಿದರು.