ಕಣಿವೆ, ಅ. 21: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಮ್ಮನಕೊಲ್ಲಿ ಕೃಷ್ಣಪ್ಪ ಬಡಾವಣೆ ಯಲ್ಲಿನ ನಿವಾಸಿಗಳು ಸೂಕ್ತ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ. ಕಳೆದ ಹದಿನೈದು ವರ್ಷಗಳ ಹಿಂದೆ ನಿರ್ಮಿತ ಈ ಬಡಾವಣೆಯಲ್ಲಿ ಬಹಳಷ್ಟು ಮಂದಿ ನಿವೇಶನಗಳನ್ನು ಖರೀದಿಸಿ ಮನೆ ಗಳನ್ನು ಕಟ್ಟಿಕೊಂಡು ವಾಸವಿದ್ದಾರೆ. ಆದರೆ ಸೂಕ್ತ ರಸ್ತೆಯೇ ಇಲ್ಲದೆ ಪರದಾಡುವ ಸ್ಥಿತಿ ಇದೆ.

ಈ ಬಡಾವಣೆಯಿಂದ ಕಳೆದ ಬಾರಿ ಮುಳ್ಳುಸೋಗೆ ಪಂಚಾಯಿತಿಗೆ ಅನೇಕರು ಚುನಾಯಿತರಾಗಿದ್ದಾರೆ. ಆದರೆ ಯಾರೂ ಕೂಡ ಸಮಸ್ಯೆಗಳಿಗೆ ಸ್ಪಂದಿಸುವ ಸೌಜನ್ಯವನ್ನೇ ತೋರುತ್ತಿಲ್ಲ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಳಿ ಲಿಖಿತ ದೂರು ನೀಡಿ ಹಾಲಿ ಇರುವ ಮಣ್ಣು ರಸ್ತೆಯನ್ನು ಸರಿಪಡಿಸಿಕೊಡಿ ಎಂದು ಮನವಿ ಮಾಡಿದರೂ ಕೂಡ ಏನೂ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳಾದ ಬಿಳಿಮೊಗ್ಗ ವೇಣು, ಜಿ.ಕೆ. ಕುಮಾರ್, ಆನಂದ್ ಮೊದಲಾದವರು ದೂರಿ ದ್ದಾರೆ.

ಮನೆಯನ್ನು ಕಟ್ಟಿಕೊಂಡ ಮೇಲೆ ಕುಡಿಯುವ ನೀರಿನ ಸಂಪರ್ಕ ಕೂಡ ಪಂಚಾಯಿತಿ ಅಳವಡಿಸಿಲ್ಲ. ಇನ್ನು ವಿದ್ಯುತ್ ಕಂಬಗಳನ್ನು ಸ್ವಂತ ಖರ್ಚಿನಿಂದಲೇ ನಮ್ಮ ಮನೆಗಳ ಬಳಿ ಹಾಕಿಸಿಕೊಂಡಿದ್ದೇವೆ. ಕುಡಿಯುವ ನೀರು, ನಡೆವ ದಾರಿಯನ್ನೂ ಕಲ್ಪಿಸದ ಪಂಚಾಯಿತಿ ಇದ್ದರೇನು ? ಇಲ್ಲದಿದ್ದರೇನು ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.