ಪೊನ್ನಂಪೇಟೆ, ಅ. 21: ಅನೈತಿಕ ರಾಜಕಾರಣದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದ ಕರ್ನಾಟಕ ರಾಜ್ಯ ಬಿಜೆಪಿ ಸರಕಾರ ಇನ್ನೂ ಕೋಮಾವಸ್ಥೆಯಲ್ಲೇ ಇದೆ. ಜನರ ನಿರೀಕ್ಷೆಯಂತೆ ಸರಕಾರ ನಡೆದುಕೊಳ್ಳುತ್ತಿಲ್ಲ. ಇದರಿಂದ ಬಿಜೆಪಿಯಲ್ಲೇ ಗುಂಪುಗಾರಿಕೆ ಹೆಚ್ಚಾಗುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗಲಿದೆ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಮಧ್ಯಂತರ ಚುನಾವಣೆಗಾಗಿ ಈಗಿನಿಂದಲೇ ಸಿದ್ದರಾಗಬೇಕು ಎಂದು ಕೆ.ಪಿ.ಸಿ.ಸಿ.ಯ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಟಿ.ಎಂ. ಶಾಹಿದ್ ಅವರು ಕರೆ ನೀಡಿದ್ದಾರೆ.

ಗೋಣಿಕೊಪ್ಪಲಿನ ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ಸೋಮವಾರದಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ನಿರ್ದೇಶನದ ಮೇರೆಗೆ ನಡೆದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಮಟ್ಟದ ‘ಅಭಿಪ್ರಾಯ ಸಂಗ್ರಹ’ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ಫೆಬ್ರವರಿ ಅಥವಾ ಮಾರ್ಚ್‍ನಲ್ಲಿ ಈಗಿನ ರಾಜ್ಯ ಸರಕಾರ ತನ್ನ ಅಂತ್ಯ ಕಂಡುಕೊಳ್ಳಲಿದೆ ಎಂದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದು ಅವರೆಲ್ಲರನ್ನೂ ಪರಸ್ಪರ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೆ ಈ ಕುರಿತು ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅವರ ಭಾವನೆಯಂತೆ ಒಮ್ಮತದ ವ್ಯಕ್ತಿಯೊಬ್ಬರನ್ನು ಅಧ್ಯಕ್ಷರಾಗಿ ಆಯ್ಕೆಗೊಳಿಸಲಾಗುವದು ಎಂದು ಇದೇ ಸಂದರ್ಭ ಶಾಹಿದ್ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿ ನೇತೃತ್ವದ ಸರಕಾರಕ್ಕಿರುವ ವ್ಯತ್ಯಾಸವನ್ನು ಜನತೆ ಇದೀಗ ಅರ್ಥೈಸತೊಡಗಿದ್ದಾರೆ. ಕೇಂದ್ರ ಸರಕಾರದ ನೀತಿಗಳಿಂದಾಗಿ ಇಂದು ದೇಶ ಹಿಂದಕ್ಕೆ ಚಲಿಸುತ್ತಿದೆ. ಭರವಸೆಗಳ ಬೆಟ್ಟವನ್ನು ತೋರಿಸಿ ರಾಜ್ಯದಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರಕಾರ ಜನರ ಹಿತಕಾಯುವಲ್ಲಿ ವಿಫಲವಾಗಿದೆ. ಕೊಡಗಿನಲ್ಲಿ ಅತಿವೃಷ್ಟಿ ಸಂತ್ರಸ್ತರ ಹಿತ ಕಾಪಾಡಬೇಕಿದ್ದ ರಾಜ್ಯ ಸರಕಾರ ಅದನ್ನು ಮರೆತು ನಿದ್ರಾವಸ್ಥೆಯಲ್ಲಿದೆ ಎಂದು ಆರೋಪಿಸಿದರಲ್ಲದೆ ರಾಜ್ಯ ಸರಕಾರ ಇನ್ನೂ ಟೇಕಾಫ್ ಆಗಲೇ ಇಲ್ಲ ಎಂದು ಲೇವಡಿ ಮಾಡಿದರು.

ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಮುಕ್ತ ಭಾರತ ಎಂಬ ಬಿಜೆಪಿಯವರ ಹಗಲುಕನಸು ಅವರಿಗೆ ತಿರುಗುಬಾಣವಾಗುವತ್ತ ಸಾಗುತ್ತಿದೆ. ಕಾಂಗ್ರೆಸನ್ನು ಇಲ್ಲವಾಗಿಸುವ ಭಾರತೀಯ ಜನತಾ ಪಕ್ಷದ ಪ್ರಯತ್ನ ಕೇವಲ ಭ್ರಮೆ. ಈ ಕುರಿತು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಬಿಜೆಪಿಯವರ ಬಂಡವಾಳ ಇದೀಗ ಒಂದೊಂದಾಗಿ ಬಯಲಾಗತೊಡಗಿದೆ. ಪ್ರಣಾಳಿಕೆಯಲ್ಲಿ ಘೋಷಿಸಿರುವ ಯಾವದೇ ಜನಪರ ಅಂಶಗಳನ್ನು ಜಾರಿಗೊಳಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಫಲವಾಗಿದೆ. ಇದನ್ನು ಜನ ಗಮನಿಸುತ್ತಿದ್ದಾರೆ ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಸಿ.ಎಸ್. ಅರುಣ್ ಮಾಚಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಕೆ. ಪೊನ್ನಪ್ಪ ಮೊದಲಾದವರು ಮಾತನಾಡಿದರು. ವೇದಿಕೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಹ್ಯಾರಿಸ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಸಂಪಾಜೆ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿಭಾಗದ ಅಧ್ಯಕ್ಷರಾದ ಕೆ. ಎಂ. ಸರಾ ಚಂಗಪ್ಪ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಕೆ. ಎಂ. ಅಬ್ದುಲ್ ರಹಮಾನ್ (ಬಾಪು), ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಟಿ.ಈ.ಸುರೇಶ್, ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರಾದ ಹೊಸೂರು ಸೂರಜ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಆಲೀರ ರಶೀದ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಜ ಶಾಜಿ ಅಚ್ಚುತನ್, ಬಿ.ಎನ್. ಪ್ರತ್ಯು, ಪಿ.ಆರ್. ಪಂಕಜ, ತಾಲೂಕು ಪಂಚಾಯತಿ ಸದಸ್ಯರಾದ ಆಶಾ ಜೇಮ್ಸ್, ಗೋಣಿಕೊಪ್ಪಲು ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಕಾಂಗ್ರೆಸ್ ಮುಖಂಡ ಎ.ಎ.ಎರಮು ಮೊದಲಾದ ಪ್ರಮುಖರು ಹಾಜರಿದ್ದರು.

ಸಭೆ ಆರಂಭಗೊಳ್ಳುತ್ತಿದ್ದಂತೆ ಇತ್ತೀಚೆಗೆ ನಿಧನರಾದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮಾಜಿ ನಾಯಕ ಎ.ಕೆ. ಸುಬ್ಬಯ್ಯ ಮತ್ತು ಕೊಡಗು ಜಿಲ್ಲಾ ಪರಿಷತ್ತಿನ ಪ್ರಥಮ ಅಧ್ಯಕ್ಷರಾಗಿದ್ದ ಜೆ.ಎ.ಕರುಂಬಯ್ಯ ಅವರಿಗೆ ಮೌನಾಚರಿಸಿ ಶ್ರದ್ದಾಂಜಲಿ ಅರ್ಪಿಸಲಾಯಿತು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಎ.ಜೆ. ಬಾಬು ಪ್ರಾರ್ಥಿಸಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಎ.ಎಸ್. ಟಾಟು ಮೊಣ್ಣಪ್ಪ ಸ್ವಾಗತಿಸಿದರು. ತೀತಿರ ಧರ್ಮಜ ಉತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಬಿ.ಎನ್. ಪ್ರಕಾಶ್ ವಂದಿಸಿದರು.