*ಗೋಣಿಕೊಪ್ಪಲು, ಅ. 21: ಪಾಲಿಬೆಟ್ಟ ಡಾ. ಬಿ.ಆರ್. ಅಂಬೇಡ್ಕರ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಆಯೋಜಿಸಿದ್ದ ರಾಜ್ಯಮಟ್ಟದ ಕಾಲ್ಚೆಂಡು ಪಂದ್ಯಾಟದ ಚಾಂಪಿಯನ್ ಪಟ್ಟವನ್ನು ಪಾಲಿಬೆಟ್ಟ ನೆಹರು ಎಫ್.ಸಿ ತಂಡ ತನ್ನ ಮುಡಿಗೇರಿಸಿಕೊಂಡಿದೆ.
ಪಾಲಿಬೆಟ್ಟ ಟಾಟಾ ಕಾಫಿ ಸಂಸ್ಥೆಯ ಗಾಲ್ಫ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಪಂದ್ಯಾಟದ ಅಂತಿಮ ಹಣಾಹಣಿಯಲ್ಲಿ ಅಮ್ಮತ್ತಿ ಮಿಲನ್ ಬಾಯ್ಸ್ ತಂಡ ಮತ್ತು ಪಾಲಿಬೆಟ್ಟ ನೆಹರು ಎಫ್.ಸಿ. ತಂಡದ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಟ ನಡೆಯಿತು. ಪಾಲಿಬೆಟ್ಟದ ನೆಹರು ತಂಡವು ಅಮ್ಮತ್ತಿ ಮಿಲನ್ಸ್ ತಂಡದ ವಿರುದ್ಧ 2-1 ಗೋಲುಗಳಿಂದ ಜಯ ಸಾಧಿಸಿತು.
ಎರಡು ತಂಡದ ನಡುವಿನ ಸೆಣಸಾಟದಲ್ಲಿ ಮೊದಲಿಗೆ ಅಮ್ಮತ್ತಿ ಮಿಲನ್ಸ್ ತಂಡದ ಆಟಗಾರ ಸುದಿ ಒಂದು ಗೋಲನ್ನು ಪಾಲಿಬೆಟ್ಟ ನೆಹರು ತಂಡದ ವಿರುದ್ಧ ದಾಖಲಿಸಿ ಸಂಭ್ರಮಿಸಿತು. ನಂತರ ಪಾಲಿಬೆಟ್ಟ ನೆಹರು ಎಫ್.ಸಿ. ತಂಡದ ಆಟಗಾರ ಅಣ್ಣಪ್ಪ ಮಿಲನ್ಸ್ ತಂಡಕ್ಕೆ 1 ಗೋಲನ್ನು ದಾಖಲಿಸಿ ಸಮಬಲ ಕಾಯ್ದುಕೊಂಡರು. ತದನಂತರ ಎರಡನೇ ಅವಧಿಯಲ್ಲಿ ನೆಹರು ಎಫ್.ಸಿ. ತಂಡದ ಆಟಗಾರ ಅಣ್ಣಪ್ಪ ಮಿಲನ್ಸ್ ತಂಡಕ್ಕೆ ಮತ್ತೊಂದು ಗೋಲು ಬಾರಿಸಿ ಜಯದ ಹಾದಿ ಸುಗಮಗೊಳಿಸಿದರು.
ಕಾಲ್ಚೆಂಡು ಪಂದ್ಯಾಟದ ಬೆಸ್ಟ್ ಗೋಲ್ ಕೀಪರ್ ಆಗಿ ಅಮ್ಮತ್ತಿ ಒಂಟಿಯಂಗಡಿ ಸಿ.ವೈ.ಸಿ ತಂಡ ರಾಕೇಶ್, ಅತ್ಯುತ್ತಮ ಶಿಸ್ತುಬದ್ದ ತಂಡವಾಗಿ ಅಮ್ಮತ್ತಿ ಒಂಟಿಯಂಗಡಿ ಸಿ.ವೈ.ಸಿ ತಂಡ, ಪಂದ್ಯಾವಳಿಯಲ್ಲಿ ಹೆಚ್ಚು ಗೋಲ್ ಬಾರಿಸಿದ ಆಟಗಾರ ನೆಹರು ಎಫ್.ಸಿ. ತಂಡದ ಅಣ್ಣಪ್ಪ, ಅತ್ಯುತ್ತಮ ಆಟಗಾರ ನೆಹರು ಎಫ್.ಸಿ. ತಂಡದ ದಿವಾಕರ್, ಮಿಡ್ ಫೀಲ್ಡರ್ ಅಮ್ಮತ್ತಿ ಮಿಲನ್ಸ್ ತಂಡದ ವಿಜು, ಬೆಸ್ಟ್ ಡಿಫೆಂಡರ್ ಮಿಲನ್ಸ್ ತಂಡ ಸಿರಾಜ್, ಭವಿಷ್ಯದ ಆಟಗಾರ ನೆಹರು ಎಫ್.ಸಿ. ತಂಡದ ಜುನೈದ್ ಪ್ರಶಸ್ತಿಗಳನ್ನು ಪಡೆದುಕೊಂಡರು.
ಸಭಾ ಕಾರ್ಯಕ್ರಮ: ಕ್ರೀಡೆಯಲ್ಲಿ ಸೋಲು ಗೆಲವು ಸಹಜ ಎಂದು ಜಿ.ಪಂ. ಸದಸ್ಯ ಮೂಕೊಂಡ ವಿಜು ಸುಬ್ರಮಣಿ ತಿಳಿಸಿದರು.
ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ಗೆಲವು ಸಾಧಿಸಿದ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಟಾಟಾ ಕಾಫಿ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಎಂ.ಬಿ. ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದಾಪುರ ಪೆÇಲೀಸ್ ಠಾಣಾಧಿಕಾರಿ ದಯಾನಂದ, ಟಾಟಾ ಕಾಫಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರಾಜೀವ್, ಟಾಟಾ ಕಾಫಿ ಸಂಸ್ಥೆಯ ಮಾಜಿ ಅಧ್ಯಕ್ಷರು ಎ.ಸಿ. ಮುತ್ತಣ್ಣ, ದಾನಿಗಳಾದ ಮುನೀರ್, ಸಂಘದ ಅಧ್ಯಕ್ಷ ರಾಜ್‍ಗೋಪಾಲ್ ಮತ್ತು ಪದಾಧಿಕಾರಿಗಳು ಹಾಜರಿದ್ದರು.