ಗೋಣಿಕೊಪ್ಪ ವರದಿ, ಅ. 21: ಹೈಸೊಡ್ಲೂರು ಗ್ರಾಮದಲ್ಲಿ ಟೆಂಟ್ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ನಿರಾಶ್ರಿತ ಆದಿವಾಸಿಗಳಿಗೆ ಮೂಲಭೂತ ಸೌಕರ್ಯ ನೀಡುವಂತೆ ಒತ್ತಾಯಿಸಿ ಹುದಿಕೇರಿ ಗ್ರಾಮ ಪಂಚಾಯಿತಿ ಎದುರು ಆಯೋಜಿಸಿದ್ದ ಪ್ರತಿಭಟನೆ ಯನ್ನು ತಾ. 30ರಂದು ನಡೆಸಲಾಗುವದು ಎಂದು ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಕೃಷ್ಣಪ್ಪ ತಿಳಿಸಿದ್ದಾರೆ.

ತಾ. 28 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು, ಆದರೆ ದೀಪಾವಳಿ ಕಾರಣ ಸರ್ಕಾರಿ ರಜೆ ಇರುವದರಿಂದ ತಾ. 30 ಕ್ಕೆ ಮುಂದೂಡಲಾಗಿದೆ ಎಂದರು.

ಅಲ್ಲಿರುವ 74 ಕುಟುಂಬಗಳಿಗೆ ಸರ್ಕಾರ ಇನ್ನೂ ಪಡಿತರ, ಮತದಾರರ ಚೀಟಿ, ಆಧಾರ್ ಹಕ್ಕು ನೀಡಿಲ್ಲ. ಇದರಿಂದ ಅವರುಗಳು ಸೌಲಭ್ಯ ವಂಚಿತರಾಗಿದ್ದಾರೆ. ಅಸ್ಸಾಂ ಮೂಲದ ಕಾರ್ಮಿಕರಿಗೆ ಎಲ್ಲಾ ಸೌಲಭ್ಯ ನೀಡುತ್ತಿದ್ದರೂ ಸ್ಥಳೀಯರಾಗಿರುವ ಇವರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.

ಡಿಎಸ್‍ಎಸ್ ಸಂಚಾಲಕ ಪರಶುರಾಮ್ ಮಾತನಾಡಿ, ಇಲ್ಲಿ ಶೌಚಾಲಯ ನಿರ್ಮಾಣಕ್ಕೆ ಹುದಿಕೇರಿ ಗ್ರಾ. ಪಂ. ಅನುಮತಿ ನೀಡಿದೆ. ಆದರೆ, ಕುಡಿಯುವ ನೀರು ಒದಗಿಸಲು ಕೊಳವೆ ಬಾವಿ ತೋಡಲು ಅನುಮತಿ ನೀಡುತ್ತಿಲ್ಲ. ಇದರಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ತಾಲೂಕು ಸಂಘಟನಾ ಸಂಚಾಲಕರಾದ ಗಣೇಶ್, ಮಣಿ, ಕರ್ಕು ಉಪಸ್ಥಿತರಿದ್ದರು.