ಕೂಡಿಗೆ, ಅ. 21: ಹಾಸನ - ಕುಶಾಲನಗರ ಹೆದ್ದಾರಿಯ ಕೂಡಿಗೆ ರಸ್ತೆಯಲ್ಲಿ ಕೊಣನೂರು ಕಡೆಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಜೀಪ್ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯ ಕಾಲು ಮುರಿತಗೊಂಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಪಾದಚಾರಿ ಸಿದ್ಧಲಿಂಗಪುರದ ಶಿವಣ್ಣ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ, ಜೀಪ್ ಏಕಾಏಕಿ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಪೆಟ್ಟಾಗಿದೆ. ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಮಡಿಕೇರಿಗೆ ಹೆಚ್ಚಿನ ಚಿಕಿತ್ಸೆಗೆ ಸಾಗಿಸಲಾಗಿದೆ. ಪಾದಚಾರಿಯು ತೊರೆನೂರು ಗ್ರಾಮ ಪಂಚಾಯ್ತಿಯ ಸಿದ್ಧಲಿಂಗಪುರದ ಶಿವಣ್ಣ ಎಂದು ತಿಳಿದುಬಂದಿದೆ.
ಜೀಪ್ ಡಿಕ್ಕಿ ಹೊಡೆದು ನಿಲ್ಲಿಸದೆ ತೆರಳಿದ್ದು, ಇದನ್ನು ಸಿಸಿ ಟಿವಿಯಲ್ಲಿ ಗಮನಿಸಿದ ಪೊಲೀಸರು; ಅರೆಕಾಡಿನ ಜೀಪು ಎಂದು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಜೀಪ್ ಚಾಲಕ ಶಿವ ಎಂಬವನ ಮೇಲೆ ಕುಶಾಲನಗರ ಸಂಚಾರಿ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.