ಮಡಿಕೇರಿ, ಅ. 21: ನಗರದ ಕೂರ್ಗ್ ಕಮ್ಯುನಿಟಿ ಹಾಲ್ ಸಭಾಂಗಣದಲ್ಲಿ ಜೆಡಿಎಸ್ ಜಿಲ್ಲಾ ಮುಖಂಡರುಗಳ ಸಭೆ ನಡೆಯಿತು. ಪಕ್ಷ ಬಲವರ್ಧನೆಗೆ ಶ್ರಮಿಸಲು ಕಾರ್ಯಕರ್ತರಿಗೆ ಪ್ರಮುಖರು ಕರೆಯಿತ್ತರು. ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಜೆಡಿಎಸ್ ಪಕ್ಷ ಬಡವರ, ನಿರ್ಗತಿಕರ, ಶೋಷಿತರ ಧನಿಯಾಗಿ ಕೆಲಸ ಮಾಡುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ 6 ದಶಕಗಳಿಂದ ಶ್ರಮಪಟ್ಟು ಪ್ರಾದೇಶಿಕತೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಜೆಡಿಎಸ್ ಕೆಲಸ ಮಾಡಿದೆ. ವಿರೋಧ ಪಕ್ಷವಾಗಿ ಜನರ ನೋವಿಗೆ ಸ್ಪಂದಿಸಿದೆ. ಕಡಿಮೆ ಅಧಿಕಾರದ ಅವಧಿಯಲ್ಲಿ ಜನಪರ ಕೆಲಸ ಮಾಡಿದೆ. ವರಿಷ್ಠ ಹೆಚ್.ಡಿ ದೇವೇಗೌಡರ ಚಿಂತನೆಯನ್ನು ಸಾಕಾರಗೊಳಿಸುವ ಕರ್ತವ್ಯ ಪ್ರತಿಯೊಬ್ಬ ಕಾರ್ಯಕರ್ತನದ್ದಾಗಿದೆ ಎಂದರು.
ಪ್ರಾಕೃತಿಕ ವಿಕೋಪಕ್ಕೆ ಕೊಡಗು ಜಿಲ್ಲೆ ತುತ್ತಾದಾಗ ಅಗತ್ಯ ಪರಿಹಾರವನ್ನು ಸಮರ್ಪಕವಾಗಿ ತಲಪಿಸುವ ಕೆಲಸವನ್ನು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮಾಡಿದೆ. ಪ್ರಸ್ತುತ ಆಡಳಿತಾರೂಡ ಪಕ್ಷ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ವೈಫಲ್ಯ ಕಂಡಿದೆ. ಅದನ್ನು ಪ್ರತಿಭಟಿಸುವ ಮೂಲಕ ಅಗತ್ಯ ಪರಿಹಾರಕ್ಕೆ ಒತ್ತಾಯಿಸಬೇಕಾಗಿದೆ ಎಂದು ಸಂಕೇತ್ ಪೂವಯ್ಯ ಹೇಳಿದರು.
ಜೆಡಿಎಸ್ ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಇಸಾಖ್ ಖಾನ್ ಮಾತನಾಡಿ, ಸಂಘಟನೆಯೊಳಗೆ ಕೆಲವರ ಗುಂಪುಗಾರಿಕೆಯಿಂದ ಗೊಂದಲಗಳು ಮೂಡಿದ್ದು ಇದಕ್ಕೆ ಪೂರ್ಣವಿರಾಮ ಹಾಕಿ ಒಗ್ಗಟ್ಟಿನಿಂದ ಪಕ್ಷ ಸಂಘಟಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಗೊಂದಲ ಮೂಡದಂತೆ ಎಚ್ಚರವಹಿಸಬೇಕು. ವರಿಷ್ಠರ ತೀರ್ಮಾನದಂತೆ ಕೆಲಸ ಮಾಡುತ್ತಿರುವ ಜಿಲ್ಲಾಧ್ಯಕ್ಷರ ಮಾರ್ಗದರ್ಶನದಲ್ಲಿ ಒಂದಾಗಿ ಕೆಲಸ ಮಾಡಿದರೆ ಪಕ್ಷ ಬೆಳವಣಿಗೆ ಸಾಧಿಸುತ್ತದೆ ಎಂದರು.
ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, ಲೋಕಸಭಾ ಚುನಾವಣೆ ನಂತರ ಪಕ್ಷದಲ್ಲಿ ನಿರಾಸೆ ಮೂಡಿದೆ. ಕಾಂಗ್ರೆಸ್ ಸೂಕ್ತವಾಗಿ ಜೆಡಿಎಸ್ನೊಂದಿಗೆ ಸಮನ್ವಯತೆ ಸಾಧಿಸದಿರುವದೇ ಸೋಲಿಗೆ ಕಾರಣವಾಯಿತು. ಮುಂದಿನ ದಿನಗಳಲ್ಲಿ ಬೂತ್ಮಟ್ಟದಲ್ಲಿ ಪಕ್ಷ ಸಂಘಟಿಸಬೇಕಾಗಿದೆ. ಚುನಾವಣಾ ಸಮಯದಲ್ಲಿ ಮಾತ್ರ ಕೆಲಸ ಮಾಡದೆ ಜೆಡಿಎಸ್ ಸರ್ಕಾರವಿದ್ದಾಗ ಮಾಡಿದ ಸಾಧನೆಯನ್ನು ಮನೆಮನೆಗೆ ತಲಪಿಸುವ ಕೆಲಸವಾಗಬೇಕು. ನನ್ನ ವಿರುದ್ಧ ಗುಂಪುಗಾರಿಕೆ ಆರೋಪಗಳು ವ್ಯಕ್ತವಾಗಿದ್ದು ನಾನು ಯಾವದೇ ಗುಂಪಿನವನಲ್ಲ ಜೆಡಿಎಸ್ ಪಕ್ಷದವನು ಎಂದರು.
ಕಾರ್ಯಕ್ರಮದಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್ ವಿಶ್ವ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಂತಿ ಅಚ್ಚಪ್ಪ, ಪ್ರಮುಖರಾದ ಮನ್ಸೂರ್ ಅಲಿ, ಯೂಸಫ್, ಮುದ್ದೇಗೌಡ, ಜಯಮ್ಮ, ಶಿವದಾಸ್, ಪಾಣತ್ತಲೆ ವಿಶ್ವನಾಥ್, ಕೇಶವನಾಥ್, ಬೋಜಪ್ಪ ಇದ್ದರು.