ಮಡಿಕೇರಿ, ಅ. 21: ಕಳೆದ 48 ಗಂಟೆಗಳಲ್ಲಿ ಕೊಡಗು ಜಿಲ್ಲೆಯಾದ್ಯಂತ ಅಲ್ಪಸ್ವಲ್ಪ ಮಳೆಯಾಗಿದೆ. ಕೆಲವೆಡೆ ಗುಡುಗು, ಮಿಂಚು ಸಹಿತ ಗಂಟೆಗಟ್ಟಲೆ ಧಾರಾಕಾರ ಮಳೆಯಾಗಿದೆ. ಉತ್ತರ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಮಳೆಯಿಂದ ಹಟ್ಟಿಹೊಳೆ ಹಾಗೂ ಮಾದಾಪುರ ಹೊಳೆ ನೀರಿನ ಮಟ್ಟ ಏರಿಕೆಗೊಂಡು ಹಾರಂಗಿ ಜಲಾಶಯ ಭರ್ತಿಯಾಗಿದೆ.
ಇನ್ನುಳಿದಂತೆ ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಮೂರ್ನಾಡು, ಮರಗೋಡು ಸುತ್ತಮುತ್ತ ಮಳೆಯಾಗಿದೆ. ಕೊಡ್ಲಿಪೇಟೆ, ಶನಿವಾರಸಂತೆ ಹೊರತು ಸೋಮವಾರಪೇಟೆಯ ಅಲ್ಲಲ್ಲಿ ಮಳೆಯಾಗಿದೆ. ಸುಂಟಿಕೊಪ್ಪ, ಕುಶಾಲನಗರ ವ್ಯಾಪ್ತಿಯಲ್ಲೂ ಮಳೆ ಸ್ಪರ್ಶ ನೀಡಿದೆ.
ದಕ್ಷಿಣ ಕೊಡಗಿನ ಬಿರುನಾಣಿ, ಶ್ರೀಮಂಗಲ, ಕುಟ್ಟ, ಪೊನ್ನಂಪೇಟೆ ಇತರೆಡೆಗಳಲ್ಲಿ ಇಂದು ಮಧ್ಯಾಹ್ನದ ತನಕ ಆಗಿಂದಾಗ್ಗೆ ಮಳೆಯಾಗಿದ್ದು, ಮೋಡದ ಛಾಯೆ ಮುಂದುವರಿದಿದೆ. ವೀರಾಜಪೇಟೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ, ಸಿದ್ದಾಪುರ ಸುತ್ತಮುತ್ತ ಕೂಡ ಮಳೆ ಗೋಚರಿಸಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತ ಕೂಡ ರಾತ್ರಿ-ಹಗಲು ಪದೇ ಪದೇ ಮಳೆಯಾಗುತ್ತಿದ್ದು, ತುಲಾ ಸಂಕ್ರಮಣ ಕಳೆದರೂ ಜಿಲ್ಲೆಯಲ್ಲಿ ಮಳೆಗಾಲದ ಹವಾಮಾನ ಮುಂದುವರಿದಿದೆ.
ನಾಪೆÇೀಕ್ಲು ಪಟ್ಟಣ, ಹಳೇ ತಾಲೂಕು, ಕೊಳಕೇರಿ, ಕುಂಜಿಲ, ನೆಲಜಿ, ಬಲ್ಲಮಾವಟಿ, ಎಮ್ಮೆಮಾಡು, ಬೇತು, ಕೊಟ್ಟಮುಡಿ ಸೇರಿದಂತೆ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಸೋಮವಾರ 12.30ರಿಂದ 1.30ರ ವರೆಗೆ ಭಾರೀ ಮಳೆ ಸುರಿಯಿತು.
ನಂತರವೂ ಮೋಡ ಕವಿದ ವಾತಾವರಣದೊಂದಿಗೆ ಸಂಜೆ 5 ಗಂಟೆಯವರೆಗೂ ತುಂತುರು ಮಳೆ ಸುರಿಯುತ್ತಲೇ ಇತ್ತು. ಸೋಮವಾರ ಸಂತೆ ದಿನವಾಗಿದ್ದರಿಂದ ಪಟ್ಟಣದಲ್ಲಿ ಹೆಚ್ಚಿನ ಜನ ಸಂದಣಿಯಿದ್ದು, ಮಳೆಯ ಕಾರಣದಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಪ್ರತಿನಿತ್ಯ ಸುರಿಯುತ್ತಿರುವ ಮಳೆಯ ಕಾರಣದಿಂದ ಈ ವ್ಯಾಪ್ತಿಯಲ್ಲಿ ಅರೇಬಿಕಾ ಕಾಫಿ ಹಣ್ಣಾಗಿ, ನೆಲಕ್ಕುದುರುತಿದ್ದು, ಕೊಳೆತು ನಾರುತ್ತಿರುವದಾಗಿ ಬೆಳೆಗಾರರು ತಿಳಿಸಿದ್ದಾರೆ.