ಪೆರಾಜೆ, ಅ. 21: ನೆಹರು ಯುವ ಕೇಂದ್ರ ಮಡಿಕೇರಿ, ಚಿಗುರು ಕ್ರೀಡಾ ಮತ್ತು ಕಲಾಯುವಕ ಮಂಡಲ ಪೆರಾಜೆ ಮಡಿಕೇರಿ ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ಪೆರಾಜೆ (ಕುಂಬಳಚೇರಿ) ಸ.ಹಿ.ಪ್ರಾ. ಶಾಲೆಯ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಡಿಕೇರಿ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಸ್ವಚ್ಛ ಭಾರತದೊಳಗೆ ನಮ್ಮ ಮನಸ್ಸು ಸ್ವಚ್ಛತೆಯಿಂದ ಕೂಡಿದ್ದರೆ ಪರಿಸರ ಸ್ವಚ್ಛವಾಗುತ್ತದೆ. ಈ ನಿಟ್ಟಿನಲ್ಲಿ ಯುವಕ ಮಂಡಲದ ಸಾಮಾಜಿಕ ಕಾರ್ಯಕ್ರಮ ಸ್ವಾಗತಾರ್ಹ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪದ್ಮಶ್ರೀ ಪ್ರಶಸ್ತಿ ವಿಜೇತ ಗಿರೀಶ್ ಭಾರದ್ವಾಜ್ ಕಾರ್ಯಕ್ರಮದ ಯಶಸ್ವಿಗೆ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಯುವಕಮಂಡಲದ ಅಧ್ಯಕ್ಷ ಶೀತಲ್ ಕುಂಬಳಚೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ಸ.ಹಿ.ಪ್ರಾ.ಶಾಲೆ ಪೆರಾಜೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಮತ್ತು ಕೊಡಗು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಬಡ್ಡಿ ತೀರ್ಪುಗಾರ ಸೋಮವಾರಪೇಟೆಯ ಯಡೂರು ಎ. ಎಂ. ಆನಂದ ಮಾಸ್ತರ್ ಮತ್ತು ಚೆಸ್ಕಾಂ ಪೆರಾಜೆಯ ಲೈನ್ ಮ್ಯಾನ್ ವಿಜಯ ಕುಮಾರ್ ಅರುಣಗುಂಜ ಇವರುಗಳಿಗೆ ಗ್ರಾಮದಲ್ಲಿ ನಿರಂತರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ, ನೆಹರು ಯುವಕೇಂದ್ರ ಕೊಡಗು ಜಿಲ್ಲಾ ಯುವ ಸಂಯೋಜನಾಧಿಕಾರಿ ಅಲಿ ಸಬ್ರಿನ್, ಪೆರಾಜೆಯ ಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ್ ಕುಂಬಳಚೇರಿ, ಗ್ರಾಮ ಪಂಚಾಯತ್ ಸದಸ್ಯರಾದ ಉದಯಚಂದ್ರ ಕುಂಬಳಚೇರಿ, ಶೀಲಾ ಚಿದಾನಂದ ನಿಡ್ಯಮಲೆ, ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ಗುಡ್ಡೆಮನೆ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಧರ್ಮಪಾಲ ಪೀಚೆಮನೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದೀಪಕ್ ಮಜಿಕೋಡಿ ಮತ್ತು ಭವಿತ್ ಕುಂಬಳಚೇರಿ ಪ್ರಾರ್ಥಿಸಿದರೆ, ಯುವಕ ಮಂಡಲದ ಕಾರ್ಯದರ್ಶಿ ನಿಶಾಂತ್ ಮಜಿಕೋಡಿ ಸ್ವಾಗತಿಸಿದರು. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ದಿವಾಕರ ಮಜಿಕೋಡಿ ನಿರೂಪಣೆಯೊಂದಿಗೆ, ಯುವಕಮಂಡಲದ ಉಪಾಧ್ಯಕ್ಷ ಭುವನ್ ಕುಂಬಳಚೇರಿ ವಂದಿಸಿದರು.

ತದನಂತರ ಸಾರ್ವಜನಿಕರಿಗೆ ಮತ್ತು ಗ್ರಾಮಸ್ಥರಿಗೆ ವಿವಿಧ ಕ್ರೀಡಾಕೂಟಗಳು ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಂತರ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಜರುಗಿದವು.