ಕಣಿವೆ, ಅ. 21 : ತನ್ನವರಿಲ್ಲದೆ ನೋವಿನಿಂದ ಗೋಳಿಡುತ್ತಿದ್ದ ರಮೇಶನನ್ನು ಕೊನೆಗೂ ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿಗೆ ಇಲ್ಲಿನ ಸಾಮಾಜಿಕ ಹೋರಾಟಗಾರ ಜಿ.ಎಲ್.ನಾಗರಾಜು, ಪ್ರಶಾಂತ್ ಮತ್ತಿತರರು ಸ್ಪಂದಿಸಿ ರಮೇಶನನ್ನು ಹುಡುಕಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಕೊಳೆತ ಸ್ಥಿತಿಯಲ್ಲಿದ್ದ ರಮೇಶನ ಕಾಲಿನಲ್ಲಿ ಸುಮಾರು ಮುಕ್ಕಾಲು ಅಡಿಗೂ ಹೆಚ್ಚು ಭಾಗವನ್ನು ಆಕ್ರಮಿಸಿದ್ದ ಕ್ರಿಮಿಕೀಟ ಗಳನ್ನು ಆಸ್ಪತ್ರೆಯ ಡಿ ದರ್ಜೆ ನೌಕರ ಚಿನ್ನಪ್ಪ ಎಂಬವರು ಸಂಪೂರ್ಣ ವಾಗಿ ಹೊರತೆಗೆದಿದ್ದಾರೆ. ರಮೇಶ್ಗೆ ಗ್ಯಾಂಗ್ರಿನ್ ಇರುವದಾಗಿ ಡಾ. ಕೀರ್ತಿರಾಜ್ ಖಚಿತಪಡಿಸಿದ್ದಾರೆ.
ಇನ್ನೊಂದು ದಿನ ಕಳೆದಿದ್ದರೂ ರಮೇಶನ ಕಾಲಿನ ಮೂಳೆ ಮಾತ್ರ ಉಳಿಯುತ್ತಿತ್ತು. ಅಷ್ಟರ ಮಟ್ಟಿಗೆ ಹುಳುಗಳು ತುಂಬಿದ್ದವು. ಎಲ್ಲಾವನ್ನು ಹೊರತೆಗೆದು ಸೂಕ್ತ ಔಷಧಿ ಹಾಗೂ ಚುಚ್ಚುಮದ್ದು ನೀಡಲಾಗಿದೆ. ಈ ಮಧ್ಯೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿಗೆ ಪ್ರತಿಕ್ರಿಯಿಸಿದ ಜಿ.ಎಲ್. ನಾಗರಾಜು, ರಮೇಶನಿಗೆ ಸಂಬಂಧಿಕರು ಇದ್ದಾರೆ. ಆದರೆ ಆತ ಯಾರೊಂದಿಗೂ ಸರಿಯಾಗಿ ಸ್ಪಂದಿಸುತ್ತಿಲ್ಲ. ನಾವೂ ಕೂಡ ನೋಡಿ ನೋಡಿ ಆರೈಕೆ ಮಾಡಿ ಸಾಕಾಗಿದ್ದೇವೆ. ನಾವು ಹೇಳಿದ್ದನ್ನೇ ಆತ ಕೇಳಲ್ಲ. ಏನು ಮಾಡೋದು ಹೇಳಿ ಎಂದು ವಿಷಾದಿಸಿದರು.
ಇನ್ನು ರಮೇಶನ ಮತ್ತೋರ್ವ ಸಂಬಂಧಿ ಪ್ರಶಾಂತ್ ಪ್ರತಿಕ್ರಿಯಿಸಿ ಈತನ ಕಾಲು ಗುಣವಾದ ಬಳಿಕ ನಮ್ಮ ಮನೆಯಲ್ಲಿನ ಕೊಠಡಿ ಯೊಂದನ್ನು ಈತನಿಗೆ ಮೀಸಲಿಟ್ಟು ಅಲ್ಲಿಗೆ ಟಿವಿಯೊಂದನ್ನು ಅಳವಡಿ ಸುತ್ತೇನೆ. ಆರಾಮವಾಗಿ ಇರಲು ಸಹಕಾರ ನೀಡುತ್ತೇನೆ ಎಂದಿದ್ದಾರೆ. ಆದರೆ ಇದೀಗ ಎಲ್ಲವೂ ರಮೇಶನ ಮನಸ್ಥಿತಿಯ ಮೇಲೆ ಅವಲಂಬಿತವಾಗಿದೆ.