ಸೋಮವಾರಪೇಟೆ, ಅ.21: ನಿನ್ನೆ ಸಂಜೆ 7.50ಕ್ಕೆ ಪಟ್ಟಣ ಸಮೀಪದ ಕಾನ್ವೆಂಟ್ ಬಾಣೆ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಗುಂಡಿನ ಧಾಳಿ ಮಾಡಿದ ಆರೋಪಿಯ ಶೋಧಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.

ಕಾನ್ವೆಂಟ್ ಬಾಣೆಯ ನಿವಾಸಿ, ಭೋವಿ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಜಿತ್ ಎಂಬಾತನ ಮೇಲೆ ಅದೇ ಗ್ರಾಮದ ಗಣಪತಿ ಎಂಬಾತ ಗುಂಡು ಹಾರಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತಕ್ಷಣ ಸುಜಿತ್‍ನನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಆಸ್ಪತ್ರೆಗೆ ಸಾಗಿಸಲಾಗಿದೆ.

ಸುಜಿತ್‍ನ ದೇಹದೊಳಗೆ 11 ಚಿಲ್ ಗಳು ಸೇರಿದ್ದು, ಮಡಿಕೇರಿಯಲ್ಲಿ 6ರನ್ನು ಹೊರತೆಗೆಯಲಾಗಿದೆ. ಉಳಿದ 5 ಚಿಲ್ ಗಳನ್ನು ಹೊರ ತೆಗೆಯಲು ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗಾಯಾಳು ಸುಜಿತ್ ನ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ.

ಘಟನೆ ನಡೆಯುತ್ತಿ ದ್ದಂತೆ ಆರೋಪಿ ಪರಾರಿಯಾಗಿದ್ದು, ಪೊಲೀಸರು ಆರೋಪಿಯ ಮನೆಗೆ ಭೇಟಿ ನೀಡಿ ಮನೆಯವರು ಹಾಗೂ ಅಕ್ಕಪಕ್ಕದವರಿಂದ ಮಾಹಿತಿ ಕಲೆ ಹಾಕಿದ್ದಾರೆ.

ಕಾನ್ವೆಂಟ್ ಬಾಣೆಯ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ಗಣಪತಿ ಕರ್ನಾಟಕ ರಾಜ್ಯ ಭೋವಿ (ವಡ್ಡರ) ಮಹಾಸಭಾದ ಜಿಲ್ಲಾಧ್ಯಕ್ಷರಾಗಿರುವ ಸುಜಿತ್ ಅವರ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿರುವ ಸಂಘಟನೆಯ ರಾಜ್ಯಾಧ್ಯಕ್ಷ ಹೆಚ್.ಮಂಜಪ್ಪ ಅವರು, ಈ ಸಂಬಂಧ ತಾ.23ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಸುಜಿತ್ ಅವರು ಕಲ್ಲುಬಂಡೆ ಕೆಲಸ ಮಾಡಿಕೊಂಡು ಬರುತ್ತಿರುವ ಭೋವಿ ಜನಾಂಗಕ್ಕೆ ಸ್ವಂತ ಕಲ್ಲುಕೋರೆ ನೀಡಬೇಕೆಂದು ಒತ್ತಾಯಿಸಿ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಇದನ್ನು ಸಹಿಸದ ಗಣಪತಿ ಎಂಬ ವ್ಯಕ್ತಿ ಭಾನುವಾರ ಸಂಜೆ ಅವರ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದು, ಆರೋಪಿಯನ್ನು ತಕ್ಷಣ ಪತ್ತೆಹಚ್ಚಿ ಬಂಧಿಸಬೇಕು ಮತ್ತು ಸುಜಿತ್ ಅವರ ಕುಟುಂಬಕ್ಕೆ ರಕ್ಷಣೆ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಆರೋಪಿ ಗಣಪತಿ ಅವರನ್ನು ಕೂಡಲೇ ಪತ್ತಹಚ್ಚಿ ಬಂಧಿಸಬೇಕು ಎಂದು ಒತ್ತಾಯಿಸಿ ತಾ. 23ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆ ಪ್ರಮುಖರಾದ ಆರ್.ಸಿ.ವಿಜಯ, ಎಂ.ಕೆ. ಸುಬ್ರಮಣಿ, ಆರ್.ಸಿ.ಅಣ್ಣಪ್ಪ, ಕೃಷ್ಣ, ರಾಜ ಉಪಸ್ಥಿತರಿದ್ದರು.ಯಾರಿಗೋ ಬೈಯುತ್ತಿದ್ದ, ಈ ಬಗ್ಗೆ ಪ್ರಶ್ನಿಸಿದ ಸಂದರ್ಭ ಜಾತಿನಿಂದನೆ ಮಾಡಿ ಗುಂಡಿನ ಧಾಳಿನಡೆಸಿರು ವದಾಗಿ ಗಾಯಾಳು ಸುಜಿತ್ ಹೇಳಿಕೆ ನೀಡಿದ್ದಾನೆ.

ಗಣಪತಿ ಮತ್ತು ಸುಜಿತ್ ಒಂದೇ ಗ್ರಾಮದವರಾಗಿದ್ದು, ಗಣಪತಿ ಮಾಹಿತಿ ಹಕ್ಕು ಕಾರ್ಯಕರ್ತನಾಗಿದ್ದ. ಹಲವಷ್ಟು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದ ಎನ್ನಲಾಗಿದೆ.

ಈ ಬಗ್ಗೆ ಸುಜಿತ್ ಹಾಗೂ ಗಣಪತಿಯ ನಡುವೆ ಆಗಾಗ್ಗೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ನಿನ್ನೆ ಸಂಜೆ ಗಣಪತಿಗೆ ಕರೆ ಮಾಡಿದ ಸುಜಿತ್, ನಿನ್ನೊಂದಿಗೆ ಮಾತನಾಡಬೇಕು. ರಸ್ತೆಗೆ ಬಾ ಎಂದು ಕರೆದಿದ್ದಾನೆ ಎನ್ನಲಾಗಿದೆ.

ರಸ್ತೆಗೆ ಆಗಮಿಸಿದ ಸಂದರ್ಭ ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆದಿದ್ದು, ಕೀಳುಮಟ್ಟದ ಭಾಷಾ ಪ್ರಯೋಗವೂ ಆಗಿದೆ ಎನ್ನಲಾಗಿದೆ. ಇದರಿಂದ ಕೆರಳಿದ ಗಣಪತಿ ತನ್ನ ಮನೆಯಲ್ಲಿದ್ದ ಡಬಲ್ ಬ್ಯಾರಲ್ ಕೋವಿಯಿಂದ ಸುಜಿತ್ ಪಕ್ಕಕ್ಕೆ ಬೆದರು ಗುಂಡು ಹಾರಿಸಿದ್ದಾನೆ. ಈ ಸಂದರ್ಭ ಕೆಲವು ‘ಚಿಲ್’ ಸುಜಿತ್ ನ ಎದೆಭಾಗದ ಕೆಳಗೆ ಹೊಕ್ಕಿದ್ದು, ಸ್ಥಳದಲ್ಲಿ ಕುಸಿದು ಬಿದ್ದಿದ್ದಾನೆ. ನಂತರ ಆಟೋ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.

ಎರಡು ತಂಡ ರಚನೆ: ಆರೋಪಿಯ ಪತ್ತೆಗೆ ಪೊಲೀಸರು ಎರಡು ತಂಡ ರಚಿಸಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ. ಡಿವೈಎಸ್‍ಪಿ ಮತ್ತು ಎಸ್‍ಐ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ತಿಳಿದುಬಂದಿದೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ 307 ಮತ್ತು ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.