ಶನಿವಾರಸಂತೆ, ಅ.21 : ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಶಿವಪುರ ಗ್ರಾಮದ ಹೊಟೇಲ್ ಮಾಲೀಕರೊಬ್ಬರು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಗ್ರಾಮದ ಎಸ್.ಎಲ್.ಎನ್. ಬಾರ್ನಲ್ಲಿ ಸಹೋದರ ಎಚ್.ವಿ. ಗಜೇಂದ್ರ ಜೊತೆ ಹೊಟೇಲ್ ನಡೆಸುತ್ತಿದ್ದ ಎಚ್.ವಿ. ಮಹೇಂದ್ರ (29) ಆತ್ಮಹತ್ಯೆಗೆ ಶರಣಾದವರು. ಸಹೋದರರು ಒಂದೇ ಕುಟುಂಬದಲ್ಲಿ ಸಂಸಾರ ಸಾಗಿಸುತ್ತಿದ್ದರೂ, ಮಹೇಂದ್ರ ಮದ್ಯವ್ಯಸನಿಯಾಗಿದ್ದು, ಮೆಣಸಿನ ಗಿಡಕ್ಕೆ ಸಿಂಪಡಿಸಲು ತಂದಿದ್ದ ವಿಷಯುಕ್ತ ಔಷಧಿಯನ್ನು ಕುಡಿದಿದ್ದರು. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.