ಕೂಡಿಗೆ, ಅ. 20: ಇಲ್ಲಿಗೆ ಸಮೀಪದ ಮದಲಾಪುರ, ಬ್ಯಾಡಗೊಟ್ಟ ಮಾರ್ಗವಾಗಿ ಸೀಗೆಹೊಸೂರು, ಯಲಕನೂರು ರಸ್ತೆ ಸೋಮವಾರಪೇಟೆಗೆ ತೆರಳಲು ಹತ್ತಿರವಾದ ರಸ್ತೆಯಾಗಿದ್ದು, ಈ ರಸ್ತೆಯು ತೀರಾ ಹದಗೆಟ್ಟಿರುವದಲ್ಲದೆ, ದ್ವಿಚಕ್ರ ವಾಹನ, ಸಾರ್ವಜನಿಕರು ತಿರುಗಾಡಲು ಸಾಧ್ಯವಾಗದ ಸ್ಥಿತಿಯಾದ ಈ ರಸ್ತೆ ಕಳೆದ 10 ವರ್ಷಗಳಿಂದಲು ಒಂದಲ್ಲೊಂದು ಭರವಸೆಗಳ ನಡುವೆ ಸಾಗುತ್ತಾ, ಬಂದಿದ್ದರು, ರಸ್ತೆ ಕಾಮಗಾರಿಯ ಮುಕ್ತಿ ಕಾಣದಂತಾಗಿದೆ.
ಈಗಾಗಲೇ ಸುರಿಯುತ್ತಿರುವ ಮಳೆಯಿಂದಾಗಿ ಭಾರೀ ಗುಂಡಿಗಳು ಬಿದ್ದಿರುವ ರಸ್ತೆಯಲ್ಲಿ ಕೊಳಚೆ ನೀರು ತುಂಬಿಕೊಂಡಿತ್ತು. ವಾಹನಗಳು ಮತ್ತು ಸಾರ್ವಜನಿಕರು ಸಂಚರಿಸಲು ಸಾಧ್ಯವಾಗುತ್ತಿಲ್ಲ.
ಇದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಅನೇಕ ಪತ್ರ ವ್ಯವಹಾರ ನಡೆಸಿದರು, ಚುನಾವಣೆಯ ಸಂದರ್ಭ ಭರವಸೆ ನೀಡಿದ ಜನಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ.
ರಸ್ತೆಯಲ್ಲಿ ತಿರುಗಾಡಲು ಸಾಧ್ಯವಾಗದೆ, ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಕೆಸರುಮಯವಾಗಿ ಶಾಲೆಗೆ ತೆರಳದೆ ಮನೆಯತ್ತ ವಾಪಾಸ್ಸು ತೆರಳುತ್ತಿರುವದು ಕಂಡುಬರುತ್ತಿದೆ.
ಈ ರಸ್ತೆಗೆ ಹೊಂದಿಕೊಂಡಂತೆ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ವಾಸವಿರುವ ಆದಿವಾಸಿಗಳು ಸಹ ಇದೇ ಮಾರ್ಗದಲ್ಲಿಯೇ ತಿರುಗಾಡುವದರಿಂದ ಅವರಿಗೂ ಕೂಡಾ ಧೂಳಿನಿಂದ ಮತ್ತು ಕೆಸರಿನಿಂದ ಅನಾರೋಗ್ಯದಿಂದ ಬಳಲುವಂತಾಗಿದೆ. ಈ ರಸ್ತೆಯ ಕೆಲ ಕಿ.ಮೀಗಳ ಕಾಮಗಾರಿಯು ನಡೆಯುತ್ತಿದೆ. ಆದಷ್ಟು ಬೇಗ ಸಿಮೆಂಟ್ ರಸ್ತೆಯನ್ನು ನಿರ್ಮಿಸುವ ಮೂಲಕ ಗ್ರಾಮಗಳನ್ನು ಕೆಸರು ಮತ್ತು ಧೂಳಿನಿಂದ ಮುಕ್ತಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ತುರ್ತಾಗಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.