ಮಡಿಕೇರಿ, ಅ. 19: ಕೊಡಗು ಪೊಲೀಸ್ ವಸತಿ ಸಮುಚ್ಛಯ ಬಳಿ ಇರುವ ಹಳೆಯ ಕೆರೆಯೊಂದಕ್ಕೆ ಕಾಯಕಲ್ಪ ನೀಡುವದರೊಂದಿಗೆ ಸುಸಜ್ಜಿತ ಉದ್ಯಾನ ಹಾಗೂ ವಿಹಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಇಂದು ಭೂಮಿಪೂಜೆ ನಡೆಸಲಾಯಿತು.ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರ ಅನುದಾನದಿಂದ ರೂ. 30 ಲಕ್ಷ ವೆಚ್ಚದಲ್ಲಿ ರೂಪಿಸುವ ಕಾಮಗಾರಿಗೆ, ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಚಾಲನೆ ನೀಡಿದರು. ಈ ಕಾಮಗಾರಿ ಶೀಘ್ರ ಪೂರ್ಣಗೊಂಡು ಜನೋಪಯೋಗಿ ಆಗಲೆಂದು ಅವರು ಆಶಿಸಿದರು.ಮೇಲ್ಮನೆ ಸದಸ್ಯ ಸುನಿಲ್ ಸುಬ್ರಮಣಿ ಪ್ರತಿಕ್ರಿಯಿಸಿ, ಪೊಲೀಸ್ ವಸತಿ ನಿಲಯ ಬಂಧುಗಳ ಕೋರಿಕೆಯಂತೆ ಅನುದಾನ ಕಲ್ಪಿಸಿದ್ದು, ಕಾಯಕಲ್ಪಗೊಳ್ಳಲಿರುವ ಕೆರೆ ಹಾಗೂ ಇತರ ಕಾಮಗಾರಿಗಳಿಂದ ಎಲ್ಲರಿಗೆ ಉಪಯೋಗ ಲಭಿಸಲಿ ಎಂದು ಆಶಯ ನುಡಿಯಾಡಿದರು.

ಈ ವೇಳೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮಿಪ್ರಿಯ ಸೇರಿದಂತೆ ನಗರಸಭೆ ಮಾಜಿ ಅಧ್ಯಕ್ಷ ಪಿ.ಡಿ. ಪೊನ್ನಪ್ಪ, ಬಿಜೆಪಿ ನಗರ ಕಾರ್ಯದರ್ಶಿ ಬಿ.ಕೆ. ಜಗದೀಶ್, ಗುತ್ತಿಗೆದಾರ ಐತಪ್ಪ ರೈ ಹಾಗೂ ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು, ಲೋಕೋಪಯೋಗಿ ಮತ್ತು ಜಿ.ಪಂ. ಇಂಜಿನಿಯರ್‍ಗಳು ಹಾಜರಿದ್ದರು.