ಗೋಣಿಕೊಪ್ಪಲು, ಅ. 19 : ಗೋಣಿಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಹಿಂದೂ ರುದ್ರಭೂಮಿಯ ಶವಾಗಾರವು ಸೇರಿದಂತೆ ಸುತ್ತಲಿನ ಪ್ರದೇಶವು ನಿರ್ವಹಣೆ ಇಲ್ಲದೆ ಗಿಡಗಂಟಿ ಬೆಳೆದು ಕಾಡು ಸೇರಿದೆ. ಹಲವು ವರ್ಷದಿಂದ ನಿರ್ವಹಣೆ ಮಾಡುತ್ತಿದ್ದ ಗ್ರಾಮದ ಹಿರಿಯರು ನಿರ್ವಹಣೆಯನ್ನು ಕೈಬಿಟ್ಟಿದ್ದಾರೆ. ಇದರ ನಿರ್ವಹಣೆ ಹೊತ್ತಿರುವ ಗೋಣಿಕೊಪ್ಪ ಗ್ರಾಮ ಪಂಚಾಯ್ತಿ ಈ ಬಗ್ಗೆ ತನಗೆ ಸಂಬಂಧವೇ ಇಲ್ಲ ಎಂಬಂತೆ ಮೌನ ವಹಿಸಿದೆ.ಹಿಂದೂ ರುದ್ರಭೂಮಿಯು ಸಂಪೂರ್ಣ ಕಾಡಿನಿಂದ ಕೂಡಿದ್ದು ಆಳೆತ್ತರಕ್ಕೆ ಗಿಡಗಂಟಿಗಳು ಬೆಳೆದು ನಿಂತಿದೆ. ವರ್ಷಕ್ಕೆ ಎರಡು ಬಾರಿ ಕಾಡು ಕಡಿದು ಶುಚಿಗೊಳಿಸುತ್ತಿದ್ದ ಗ್ರಾಮ ಪಂಚಾಯ್ತಿ ಇತ್ತೀಚೆಗೆ ಈ ಕಾರ್ಯ ಮಾಡದೆ ಕೇವಲ ಆರೋಪ, ಪ್ರತ್ಯಾರೋಪದಲ್ಲಿ ಕಾಲ ಹರಣ ಮಾಡುತ್ತಿದೆ.2005ರಲ್ಲಿ 11ನೇ ಹಣಕಾಸಿನ ಯೋಜನೆಯಲ್ಲಿ ಈ ಚಿತಾಗಾರವನ್ನು ನಿರ್ಮಿಸಲಾಗಿದ್ದು ಅಂದಿನ ಪಂಚಾಯ್ತಿ ಅಧ್ಯಕ್ಷ ಬಿ.ಡಿ. ಮುಕುಂದ, ಮಾಜಿ ಅಧ್ಯಕ್ಷರಾದ ಬಿ.ಎಂ. ಅಪ್ಪಾಜಿ, ಎಂ.ಪಿ.ಜನಾರ್ಧನ್

(ಮೊದಲ ಪುಟದಿಂದ) ಹಾಗೂ ರುದ್ರಭೂಮಿಯ ನಿರ್ವಹಣೆಯ ಕಾರ್ಯದರ್ಶಿಯಾಗಿದ್ದ ಪಿ.ಕೆ. ವಿಜಯನ್ ಅವರು ಇದರ ನಿರ್ವಹಣೆ ಮಾಡುತ್ತಿದ್ದರು. ಇತ್ತೀಚೆಗೆ ಕಾರ್ಯದರ್ಶಿ ಪಿ.ಕೆ.ವಿಜಯನ್ ಅವರು ಶವಾಗಾರದ ಬಾಗಿಲಿನ ಬೀಗದ ಕೀಯನ್ನು ಪಂಚಾಯ್ತಿಗೆ ವಾಪಾಸ್ಸು ನೀಡಿದ ಬಳಿಕ ಇಲ್ಲಿಯ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ.ಮುಖ್ಯ ಪಟ್ಟಣದಲ್ಲಿರುವ ಈ ಶವಾಗಾರಕ್ಕೆ ಸುತ್ತಮುತ್ತಲಿನಲ್ಲಿ ಮೃತಪಟ್ಟ ಶವಗಳನ್ನು ತಂದು ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಇದಕ್ಕಾಗಿ ಪಂಚಾಯ್ತಿಯಲ್ಲಿ ಹಣ ಮೀಸಲಿದ್ದರೂ ಇಲ್ಲಿಯ ನಿರ್ವಹಣೆ ನೆನೆಗುದಿಗೆ ಬಿದ್ದಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಮೂರನೇ ವಿಭಾಗದ ಹಿಂದೂಪರ ಸಂಘಟನೆಯ 30ಕ್ಕೂ ಅಧಿಕ ಯುವಕರು ಹಿಂದೂ ರುದ್ರಭೂಮಿಗೆ ತೆರಳಿ ಸ್ವತಃ ಕಾಡು ಕಡಿದು ಶುಚಿಗೊಳಿಸಿದ್ದಾರೆ.

ಈ ಹಿಂದೆ ಇದ್ದಂತಹ ಹಲವು ಸಾರ್ವಜನಿಕ ಮುಖಂಡರ ನಿರ್ವಹಣಾ ಸಮಿತಿ ಕೆಲಸ ನಿರ್ವಹಿಸಿ ದ್ದಲ್ಲಿ ಇಲ್ಲಿನ ಸಮಸ್ಯೆ ಪರಿಹಾರ ವಾಗಲಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.

ನಾವೇ ಶುಚಿಗೊಳಿಸಿದ್ದೇವೆ

ಹಿಂದೂ ರುದ್ರಭೂಮಿಯ ಅವ್ಯವಸ್ಥೆಯ ಬಗ್ಗೆ ಪಂಚಾಯ್ತಿ ತಲೆ ಕೆಡಿಸಿಕೊಂಡಿಲ್ಲ. ಬೆಳೆದಿರುವ ಗಿಡಗಂಟಿಗಳನ್ನು ನಾವೇ ಯುವಕರು ಸೇರಿ ಕಡಿದು ಶುಚಿಗೊಳಿಸಿದ್ದೇವೆ. ಗೇಟಿನ ಮುಂಭಾಗದಲ್ಲಿ ಕಸದ ರಾಶಿ ಸುರಿದಿರುವದರಿಂದ ಈ ಭಾಗದಲ್ಲಿ ದುರ್ನಾತ ಬೀರುತ್ತಿದೆ. ಪಂಚಾಯ್ತಿ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಹಿಂದೂಪರ ಯುವಕರು ಪಂಚಾಯ್ತಿ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಮೂರನೇ ವಿಭಾಗದ ನಿವಾಸಿ ಶ್ರೀನಿ ಹೇಳಿದ್ದಾರೆ.

ಹಿಂದೂ ರುದ್ರಭೂಮಿಯಲ್ಲಿರುವ ಶವಗಾರದ ಶುಚಿ ಗೊಳಿಸುವಿಕೆ ಪಂಚಾಯ್ತಿಗೆ ಸಾಧ್ಯವಾಗದಿದ್ದಲ್ಲಿ ಸಾರ್ವಜನಿಕರಿಗೆ ಇದರ ಜವಾಬ್ದಾರಿ ವಹಿಸಿಕೊಡಿ ಎಂದು ಸತೀಶ್ ಆಗ್ರಹಿಸಿದ್ದಾರೆ.

ಮನವಿ ಪತ್ರಕ್ಕೆ ಬೆಲೆ ಇಲ್ಲ

ಹಲವು ಬಾರಿ ಪಂಚಾಯ್ತಿಗೆ ತೆರಳಿ ಹಿಂದೂ ರುದ್ರಭೂಮಿಯ ನಿರ್ವಹಣೆಯ ಬಗ್ಗೆ ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ಸದಸ್ಯರ,ಅಧ್ಯಕ್ಷರ ಪಿಡಿಒ ಅವರ ಗಮನ ಸೆಳೆದಿದ್ದೇವೆ. ಆದರೆ ಹಿಂದೂ ರುದ್ರಭೂಮಿಯ ಬಗ್ಗೆ ಇವರಿಗೆ ಕಿಂಚಿತ್ತು ಕಾಳಜಿ ಇಲ್ಲ ಎಂಬದು ಮನದಟ್ಟಾಗಿದೆ ಹಿಂದೂಪರ ಸಂಘಟನೆಯವರು ಸೇರಿ ಪಂಚಾಯ್ತಿಯ ಕಾರ್ಯವೈಖರಿಯ ಬಗ್ಗೆ ಹೋರಾಟ ಮಾಡುವ ಚಿಂತನೆ ನಡೆಸಿದ್ದೇವೆ ಎಂದು ಹಿಂದೂ ಮಲಯಾಳಿ ಸಮಾಜ ಅಧ್ಯಕ್ಷ ಶರತ್‍ಕಾಂತ್ ಹೇಳಿದ್ದಾರೆ.