ಕಣಿವೆ, ಅ. 20 : ಆಧುನಿಕ ಜೀವನ ಶೈಲಿ ಧೂಳೆಬ್ಬಿಸುತ್ತಿರುವ ಇಂದಿನ ದಿನಮಾನಗಳಲ್ಲಿ ಮನುಷ್ಯ ಸಂಬಂಧಗಳು ಮೌಲ್ಯವನ್ನು ಕಳೆದು ಕೊಳ್ಳುತ್ತಿವೆಯೇ...? ಅಥವಾ ಅಸಹಾಯಕರು, ನೊಂದವರು ಹಾಗೂ ಅಬಲರಿಗೆ ಏನಾದರೂ ಸಹಾಯ ಮಾಡಲು ಮಿಡಿಯ ಬೇಕಾದ ‘ಮನ’ ಮಾನವೀಯತೆಯ ರಹಿತ ವಾಗುತ್ತಿದೆಯೇ ? ಎಂಬ ಆತಂಕದ ಪ್ರಶ್ನೆಗೆ ಹೌದು ಎಂಬಂತಿದೆ ಕುಶಾಲನಗರದ ರಥ ಬೀದಿಯ ಅಂಗಡಿ ಮಳಿಗೆ ಯೊಂದರ ಬಳಿ ಕೊಳೆತ ಸ್ಥಿತಿಯಲ್ಲಿನ ತನ್ನ ಬಲಗಾಲನ್ನು ಹಿಡಿದು ರೋಧಿಸುತ್ತಿದ್ದ ವ್ಯಕ್ತಿಯೊಬ್ಬನ ಸ್ಥಿತಿ.
ಈತನ ಹೆಸರು ರಮೇಶ. 40 ರ ವಯೋಮಾನದ ಆಸುಪಾಸಿನವ. ಕುಶಾಲನಗರದ ನಿವಾಸಿಯೇ ಆಗಿರುವ ಈತನಿಗೆ ವಾರಸುದಾರರೇ ಇಲ್ಲ. ಅಂದರೆ ಅಪ್ಪ - ಅಮ್ಮ, ಸೋದರ- ಸೋದರಿ ಪರಿವಾರದವರು ಯಾರು ಇಲ್ಲವಂತೆ. ರಮೇಶನಿಗೆ ತನ್ನ ತಂದೆಯ ಸಂಬಂಧಿಕರು ಇದ್ದಾರೆ. ಎನ್ನಲಾಗುತ್ತಿದೆ. ಆದರೆ, ಏಕೆ ಈತನ ಆರೈಕೆಗೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆಯೂ ಇಲ್ಲಿ ಮೂಡುತ್ತದೆ. ಇನ್ನು ಕುಶಾಲನಗರದಲ್ಲಿ ಹುಟ್ಟಿ ಕೊಂಡಿರುವ ಸ್ವಯಂ ಸೇವಾ ಸಂಘಗಳು, ಸಮಾಜ ಹಿತ ಚಿಂತಕರು ಯಾರಾದರೂ ಇನ್ನಾದರೂ ಮನಸ್ಸು ಮಾಡಿ ಈ ರಮೇಶನಿಗೆ ಚಿಕಿತ್ಸೆಗೆ
ನೆರವಾಗಬಲ್ಲರೆ? ಈ ರಮೇಶನ ಕಾಲು ಗ್ಯಾಂಗ್ರೀನ್ ಗೆ ತುತ್ತಾಗಿ ಎರಡು ಮೂರು ವರ್ಷಗಳು ಕಳೆದಿವೆ. ಅಂದಿನಿಂದಲೂ ಈತ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಬಂದು ಉಚಿತವಾದ ಚಿಕಿತ್ಸೆ ಹಾಗೂ ಔಷಧಿ ಪಡೆಯುತ್ತಿದ್ದ ಎನ್ನಲಾಗಿದ್ದು, ಇಡೀ ಪಟ್ಟಣದಾದ್ಯಂತ ಕಾಲನ್ನು ಎಳೆದಾಡಿಕೊಂಡೇ ತಿರುಗಾಡಿ ಕೊಂಡು ಅನ್ನಾಹಾರ ಗಳಿಸಿ ಬದುಕುತ್ತಿದ್ದ. ಇದೀಗ ಕಾಲು ಬಹುತೇಕ ಕೊಳೆಯ ಲಾರಂಭಿಸಿದ್ದು, ಕುಳಿತಲ್ಲಿಂದ ಮೇಲೇಳಲು ಆಗದ ಸ್ಥಿತಿಗೆ ತಲುಪಿದ್ದಾನೆ. ನಿತ್ಯವೂ ಬೆಳಗಿನ ಅವಧಿ ನಮ್ಮ ಮನೆಗೆ ಬಂದು ತಿಂಡಿ ಕೇಳಿ ತಿನ್ನುತ್ತಿದ್ದ. ಇದೀಗ ಕಾಲು ನೋವು ಜಾಸ್ತಿ ಆಗಿರುವದರಿಂದ ಬಂದಿಲ್ಲ ಎಂದು ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಎಂ.ಡಿ. ರಂಗಸ್ವಾಮಿಯವರು ತಿಳಿಸಿದ್ದು, ರಮೇಶನಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆ ಇದೆ. -ಕೆ.ಎಸ್. ಮೂರ್ತಿ