ಮಡಿಕೇರಿ, ಅ.20: ಮಡಿಕೇರಿಯ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಕಾಯಕಲ್ಪ ಸಿದ್ಧತೆ ನಡೆದಿದೆ. ಜೊತೆಗೇ ಪುರಾತನ ಶ್ರೀ ಆಂಜನೇಯ ದೇವಾಲಯ ಆವರಣದಲ್ಲಿಯೂ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪುಲಿಯಂಡ ಜಗದೀಶ್ ಅವರು ಈ ಕುರಿತು “ಶಕ್ತಿ” ಗೆ ಮಾಹಿತಿ ನೀಡಿದ್ದಾರೆ. ಸುಮಾರು ರೂ. 1.85 ಕೋಟಿಯ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಓಂಕಾರೇಶ್ವರ ದೇವಾಲ ಯದಲ್ಲಿ ಅಷ್ಟಬಂಧ, ಬ್ರಹ್ಮಕಲಶೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ 2020 ಕ್ಕೆ ಓಂಕಾರೇಶ್ವರ ದೇವಾಲಯವನ್ನು ನಿರ್ಮಿಸಿ 200 ವರ್ಷಗಳು ತುಂಬಲಿರುವ ಹಿನ್ನೆಲೆಯಲ್ಲಿ ಆ ಸಂದರ್ಭವೇ ಬ್ರಹ್ಮಕಲಶವನ್ನು ನಡೆಸಲು ತೀರ್ಮಾನಿ ಸಲಾಗಿದೆ. ಜೊತೆಗೇ ದ್ವಿ ಶತ ಮಾನೋತ್ಸವ ಆಚರ ಣೆಯೂ ನಡೆಯಲಿದೆ.
ಪ್ರಶ್ನೆಯಲ್ಲಿ ಗೋಚರ ಇತ್ತೀಚೆಗಷ್ಟೆ ಶ್ರೀ ಆಂಜನೇಯ ದೇಗುಲ ಪುನರ್ ನಿರ್ಮಾಣಗೊಂಡ ಸಂದರ್ಭದಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ಇರಿಸಲಾಗಿತ್ತು. ಆಂಜನೇಯ ದೇಗುಲದ ಪುನರ್ ನಿರ್ಮಾಣದ ಬಳಿಕ ಓಂಕಾರೇಶ್ವರ ದೇವಾಲಯದಲ್ಲಿಯೂ ಅಗತ್ಯವಾಗಿ ಅಷ್ಟಬಂಧ, ಬ್ರಹ್ಮಕಲ ಶೋತ್ಸವವನ್ನು ನಡೆಸಲೇಬೇಕೆಂದು ಕೇರಳದ ಜ್ಯೋತಿಶಾಸ್ತ್ರಜ್ಞರು ಸ್ಪಷ್ಟ ಸೂಚನೆ ನೀಡಿದ್ದರು. ಹೀಗಾದರೆ ಮಾತ್ರ ನಾಡಿನ ದುರಂತಗಳು ಮಾಯವಾಗಿ ಸುಭಿಕ್ಷ ಉಂಟಾಗುತ್ತದೆ ಎಂದು ಶಾಸ್ತ್ರಾನುಸಾರ ಮಾರ್ಗ ದರ್ಶನವಿತ್ತಿದ್ದರು. ಈ ಹಿನ್ನೆಲೆಯಲ್ಲಿ ಈಗಿನ ಯೋಜಿತ ಧಾರ್ಮಿಕ ಕಾರ್ಯಕ್ರಮಗಳು ಮಹತ್ವ ಪಡೆದುಕೊಂಡಿವೆ.
(ಮೊದಲ ಪುಟದಿಂದ)
ಯೋಜಿತ ಅಭಿವೃದ್ಧಿ ಕಾರ್ಯಗಳ ಪೈಕಿ ಶ್ರೀ ಓಂಕಾರೇಶ್ವರ ಸುತ್ತಲಿರುವ ಪೌಳಿಯ ಹಳೆಯ ಶೀಟುಗಳನ್ನು ತೆರವುಗೊಳಿಸಿ ಸ್ಟೀಲ್ ಗ್ರಿಲ್‍ಗಳನ್ನು ಅಳವಡಿಸಿ ಹೆಂಚಿನ ಛಾವಣಿಯನ್ನು ನಿರ್ಮಿಸಲಾಗುವದು. ದೇವಾಲಯದ ಹೊರಾಂಗಣದಲ್ಲಿ ಅರ್ಚಕರು ಮತ್ತು ಸಿಬ್ಬಂದಿಗೆ ವಸತಿಗೃಹಗಳನ್ನು ನಿರ್ಮಿಸಲು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ. ದೇವಾಲಯ ಮುಂಭಾಗದ ಕಲ್ಯಾಣಿ ಕೊಳವನ್ನು ಸಂಪೂರ್ಣ ದುರಸ್ತಿ ಮಾಡಲಾಗುವದು. ಆ ಸಂದರ್ಭ ನೀರನ್ನು ಪೂರ್ಣವಾಗಿ ಖಾಲಿ ಮಾಡಬೇಕಾಗಿದೆ. ಆದರೆ, ಕೊಳದಲ್ಲಿರುವ ಮತ್ಸ್ಯ, ಆಮೆ ಇತ್ಯಾದಿಗಳನ್ನು ಸಾಯದಂತೆ ಮುನ್ನೆಚ್ಚರಿಕೆ ವಹಿಸಲು ಅವುಗಳನ್ನು ಬೇರೆ ಕಡೆ ತಾತ್ಕಾಲಿಕವಾಗಿ ರಕ್ಷಿಸಲು ವಿಶೇಷ ತಂತ್ರಜ್ಞರ ನೆರವು ಪಡೆಯಲಾಗುವದು. ಈ ಜಲಚರ ಪ್ರಾಣಿಗಳಿದ್ದರೆ ಮಾತ್ರ ಈ ಕೊಳಕ್ಕೆ ಮಹತ್ವ ಹಾಗೂ ನೀರಿನ ಸ್ವಚ್ಛತೆಗೂ ಪೂರಕವಾಗುತ್ತದೆ.
ನವಗ್ರಹ ವನ
ಇತ್ತ ಶ್ರೀ ಆಂಜನೇಯ ದೇಗುಲ ಆವರಣದಲ್ಲಿ ವಿಶೇಷ ಪೂಜೆಗಳ ಸಂದರ್ಭ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲು, ಅವರು ತಂದ ಪೂಜಾ ಸಾಮಗ್ರಿಗಳನ್ನು ಇರಿಸಲು ಹಾಗೂ ದೇವಾಲಯದ ಒಳಗೆ ಒತ್ತಡ ನಿವಾರಿಸಲು ಕಿರು ಭವನವೊಂದನ್ನು ನಿರ್ಮಿಸಲಾಗುವದು. ಅಲ್ಲದೆ, ಪರಿಣಿತರ ಸಲಹೆ ಪಡೆದು ನವಗ್ರಹ ವನ ಸ್ಥಾಪಿಸಲಾಗುವದು. ಜೊತೆಗೆ ಖಾಲಿ ನಿವೇಶನದಲ್ಲಿ ದಾಸವಾಳ ಹೂಗಿಡಗಳನ್ನು ಬೆಳೆಸಲಾಗುವದು. ಸಂಜೆ ಹಾಗೂ ಬೆಳಗಿನ ವೇಳೆ ವಾಯು ಸೇವನೆಗೆ ಹಾಗೂ ವಾಯು ವಿಹಾರದ ಆರೋಗ್ಯ ನಡಿಗೆ ಮಾಡುವವರಿಗೆ ಅಲ್ಲಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯೊಂದಿಗೆ ಸುತ್ತಲೂ ಹಸಿರು ದರ್ಶನಕ್ಕೆ ಆಸ್ಪದ ಕಲ್ಪಿಸಲಾಗುತ್ತದೆ. ಆಂಜನೇಯ ದೇವಾಲಯ ಮಹಾದ್ವಾರವÀನ್ನು ಕೂಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.
ಓಂಕಾರ್ ಸದನದ ಬಳಕೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ಸಂಕೀರ್ಣವನ್ನು ವಿಸ್ತರಿಸಲಾಗಿದೆ. ಮುಂದಿನ ದಿನಗಳಲ್ಲಿ ಮೇಲ್ಮಹಡಿ ಕಟ್ಟಡ ನಿರ್ಮಿಸುವ ಮೂಲಕ ಇನ್ನೂ ಅಧಿಕ ಮಂದಿ ಭಾಗವಹಿಸಬಹುದಾದ ಕಾರ್ಯಕ್ರಮಗಳಿಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಓಂಕಾರ್ ಸದನದ ಮುಂಭಾಗದಲ್ಲಿರುವ ಶೌಚಾಲಯ ಗಳನ್ನು ತೆಗೆದು ಹಾಕಿ ಆ ಭಾಗವನ್ನು ವಿಸ್ತರಣೆಗೊಳಿಸುವದರೊಂದಿಗೆ ಹಿಂಭಾಗದಲ್ಲಿರುವ ಕೊಠಡಿ ಯೊಂದನ್ನು ತೆಗೆದು, ಕೈತೊಳೆಯಲು ದಟ್ಟಣೆಯನ್ನು ಕಡಿಮೆ ಮಾಡಿ ಸುಸೂತ್ರವಾಗಿ ಜನರು ಓಡಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಈಗಾಗಲೇ ಪ್ರವಾಸೋದ್ಯಮ ಮತ್ತಿತರ ಇಲಾಖೆಗಳ ಸಹಕಾರದಿಂದ ಸುಲಭ್ ಶೌಚಾಲಯ ಹಾಗೂ ವಾಹನ ನಿಲುಗಡೆ ವ್ಯವಸ್ಥೆಗÉ ಯೋಜನೆ ಮಂಜೂರುಗೊಂಡಿದ್ದು ದೇವಾಲ ಯದ ಭಕ್ತಾದಿಗಳಿಗೂ ಇದು ಅನುಕೂಲ ಒದಗಿಸಲಿದೆ.
ಸಮಿತಿಯ ಆಡಳಿತದÀಲ್ಲಿರುವ ಅಶ್ವತ್ಥಕಟ್ಟೆ ಅಭಿವೃದ್ಧಿಗೆ ಈಗಾಗಲೇ ಕಾಮಗಾರಿ ನಡೆಯುತ್ತಿದೆ. ಪ್ರಾಚ್ಯ ವಸ್ತು ಇಲಾಖೆ ಅನುಮತಿ ನೀಡಿದರೆ ಶ್ರೀ ಕೋಟೆ ಮಹಾಗಣಪತಿ ದೇವಾಲಯ ದಲ್ಲಿಯೂ ನೂತನ ವ್ಯವಸ್ಥಿತ ಛಾವಣಿ ಅಳವಡಿಕೆ, ಟೈಲ್ಸ್‍ಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ.
ಅಸಹನೀಯ ಉಡುಪು ನಿರ್ಬಂಧ
ಈಗಾಗಲೇ ಸಾಕಷ್ಟು ಮೂಲಭೂತ ಸೌಲಭ್ಯಗಳೊಂದಿಗೆ ದೇವಾಲಯಕ್ಕೆ ವಿಶೇಷ ಬೆಳಕಿನ ವ್ಯವಸ್ಥೆ, ನೀರಿನ ಸೌಲಭ್ಯ, ಸಮರ್ಪಕ ಪೂಜೆ, ಭಕ್ತರಿಗೆ ಸೇವೆಯೊಂದಿಗೆ ಪ್ರಸಾದ, ಪರ್ವಕಾಲದ ಸೇವೆಗಳನ್ನು ಅರ್ಥ ಪೂರ್ಣವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ದಿಸೆಯಲ್ಲಿ ಶಾಸಕರುಗಳು ಪೂರ್ಣ ಪ್ರಮಾಣದ ಪ್ರೋತ್ಸಾಹ ಬೆಂಬಲದೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುತ್ತಿದ್ದು ಮುಂದಿನ ಅಭಿವೃದ್ಧಿ ಕಾರ್ಯಗಳಿಗೂ ಸಹಕರಿಸುವ ಭರವಸೆಯಿತ್ತಿದ್ದಾರೆ. ದೇವಾಲಯ ಪ್ರವೇಶಕ್ಕೆ ಉಡುಪು ಧಾರಣಾ ನಿಯಮವನ್ನೂ ಕೂಡ ಸದ್ಯದಲ್ಲಿಯೇ ಜಾರಿಗೊಳಿಸ ಲಾಗುವದು. ತೀರಾ ಅಸಹನೀಯ ಉಡುಪುಗಳನ್ನು ಧರಿಸಿದವರಿಗೆ ಪ್ರವೇಶಾವಕಾಶ ನಿರಾಕರಿಸುವ ಪ್ರಯತ್ನ ನಡೆದಿದೆ.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಎರಡು ದೇವಾಲಯಗಳಿಗೂ ಭೇಟಿ ನೀಡಿ ಸ್ವತ: ಪರಿಶೀಲನೆ ನಡೆಸಿ ಕೈಗೊಳ್ಳಬೇಕಾದ ಅಗತ್ಯ ಕೆಲಸಗಳು, ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಮಾಹಿತಿ ಪಡೆದಿದ್ದಾರೆ. ಈ ಎಲ್ಲ ಕೆಲಸಗಳಿಗೆ ದೇವಾಲಯಕ್ಕೆ ಬರುವ ಭಕ್ತಾದಿಗಳ ಹುಂಡಿಯ ಹಣ, ನಿರ್ಮಿತಿ ಕೇಂದ್ರ, ಪ್ರವಾಸೋದ್ಯಮ ಇಲಾಖೆ, ನಗರ ಸಭೆಯಿಂದ ಲಭ್ಯವಿರುವ ಅನುದಾನದಿಂದ ಬಳಸಿಕೊಳ್ಳುವ ಬಗ್ಗೆ ಹಸಿರು ನಿಶಾನೆ ನೀಡಿದ್ದಾರೆ. ಇನ್ನೂ ಅಧಿಕ ಮೊತ್ತದ ಕೆಲಸಗಳ ಬಗ್ಗೆ ಯೋಜನೆಗಳ ಪ್ರಸ್ತಾವನೆಯೊಂದಿಗೆ ಸರಕಾರದಿಂದ ಹಾಗೂ ಶಾಸಕರ ಸಹಕಾರದಿಂದ ಹೆಚ್ಚಿನ ಹಣ ದೊರಕಿಸುವ ಕುರಿತು ಪೂರ್ಣ ಭರವಸೆಯತ್ತಿದ್ದಾರೆ.
ಕರ್ಪೂರ ಬಳಕೆಗೆ ಕಡಿವಾಣ
ಇದೀಗ ದೇವಾಲಯದಲ್ಲಿ ಕರ್ಪೂರ ಬಳಕೆಯನ್ನು ಕ್ಷೀಣಗೊಳಿಸಲಾಗಿದೆ. ಬತ್ತಿಯನ್ನು ಬಳಸಿ ಮಂಗಳಾರತಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಭಕ್ತಾದಿಗಳು ಕೈಗೊಳ್ಳುವ ವಿಶೇಷ ಪೂಜೆಗಳಿಗೆ ಸಂಕಲ್ಪ ಮಾಡಿದ ಬಳಿಕವೇ ಪೂಜೆ ನೆರವೇರಿಸುವಂತೆ ಏರ್ಪಾಡು ಮಾಡಲಾಗಿದೆ. ಇದೀಗ ಪ್ರಧಾನ ಅರ್ಚಕರು, ಪಾರುಪತ್ತೇಗಾರರು ಹಾಗೂ ಭದ್ರತಾ ಸಿಬ್ಬಂದಿಯ ಕೊರತೆಯಿದ್ದು ಸದ್ಯದಲ್ಲಿಯೇ ಈ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳಲಾಗುತ್ತದೆ.
ಭಕ್ತಾದಿಗಳಲ್ಲಿ ಒಂದು ವಿನಂತಿಯೆಂದರೆ, ತಮ್ಮ ಕಾಣಿಕೆಗಳನ್ನು ಹುಂಡಿಗೆ ಹಾಕಲು ಹಿಂಜರಿಯಬೇಡಿ. ಹುಂಡಿಗೆ ಹಾಕುವ ಹಣ ಸರಕಾರದ ಇತರ ಯಾವದೇ ಇಲಾಖೆÉಗಳಿಗೆ ಸಂದಾಯವಾಗುವದಿಲ್ಲ. ದೇವಾಲ ಯದ ಅಭಿವೃದ್ಧಿಗೇ ವಿನಿಯೋಗಿಸಲು ಸರಕಾರ ಅವಕಾಶ ಕಲ್ಪಿಸಿದೆ. ಹೀಗಾಗಿ ಭಕ್ತಾದಿಗಳು ಪೂರ್ಣ ಮನಸ್ಸಿನಿಂದ ಹುಂಡಿಗೆ ಕಾಣಿಕೆ ಹಾಕಿದರೆ ಅದು ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೇ ನೇರವಾಗಿ ಬಳಸಲ್ಪ್ಪಡುತ್ತದೆ ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪುಲಿಯಂಡ ಜಗದೀಶ್ “ಶಕ್ತಿ”ಯೊಂದಿಗೆ ಮಾತು ಮುಕ್ತಾಯಗೊಳಿಸಿದರು.