ಮಡಿಕೇರಿ, ಅ. 19: ಮನೋವೈದ್ಯರು ಹಾಗೂ ಮಾನಸಿಕ ಒತ್ತಡಗಳಿಂದ ಬಳಲುತ್ತಿರುವವರನ್ನು ಸಿನಿಮಾಗಳಲ್ಲಾಗಲೀ, ಸಾಮಾಜಿಕ ಜಾಲತಾಣ ಗಳಲ್ಲಾಗಲೀ ಅಪಹಾಸ್ಯ ಮಾಡುವದು, ಕೆಟ್ಟದಾಗಿ ಬಿಂಬಿಸುವಂಥ ಪ್ರಕರಣಗಳ ವಿರುದ್ಧ ಕಾನೂನಾತ್ಮಕ ಹೋರಾಟ ಕೈಗೊಂಡು ಇಂಥ ವಿಕೃತ ಪ್ರವೃತ್ತಿಗೆ ಕಡಿವಾಣ ಹಾಕಲಾಗುತ್ತದೆ ಎಂದು ಭಾರತೀಯ ಮನೋವೈದ್ಯರ ಸಂಘದ ಅಧ್ಯಕ್ಷ ಡಾ. ಮುರುಗೇಶ್ ವೈಷ್ಣವ್ ಹೇಳಿದ್ದಾರೆ.ಮಡಿಕೇರಿಯ ಕೊಡಗು ವೈದ್ಯಕೀಯ ಸಂಸ್ಥೆಯ ಸಹಯೋಗದಲ್ಲಿ ದಕ್ಷಿಣ ಭಾರತೀಯ ಮನೋವೈದ್ಯರ ಸಂಘದ ವತಿಯಿಂದ ಆಯೋಜಿತ 52 ನೇ ಸಮಾವೇಶದ ಎರಡನೇ ದಿನ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಮುರುಗೇಶ್ ವೈಷ್ಣವ್, ಈಗಾಗಲೇ ಭಾರತೀಯ ಮನೋವೈದ್ಯರ ಸಂಘವು ಹಿಂದಿ ಸಿನಿಮಾ ಮೆಂಟಲ್ ಹೈ ಕ್ಯಾ ಎಂಬ ಹೆಸರಿನ ವಿರುದ್ಧ ಹೋರಾಟ ಕೈಗೊಂಡು ಕೊನೆಗೂ ಹೆಸರು ಬದಲಾವಣೆ ಮಾಡುವಲ್ಲಿ ಸಫಲವಾಗಿದೆ. ಸಿನಿಮಾಗಳಲ್ಲಿ ಮಾನಸಿಕ ಒತ್ತಡಗಳಿಂದ ಬಳಲುತ್ತಿರುವವರನ್ನು ಹುಚ್ಚರಂತೆ ಬಿಂಬಿಸುವುÀು, ಮನೋವೈದ್ಯರನ್ನು ಅಪಹಾಸ್ಯ ಮಾಡುವದು ಇತ್ಯಾದಿಗಳ ವಿರುದ್ಧ ಸಂಘವು ದಿಟ್ಟ ಹೋರಾಟಕ್ಕೆ ಮುಂದಾಗಿ ಹಲವಷ್ಟು ಪ್ರಕರಣಗಳಲ್ಲಿ ಜಯಸಾಧಿಸಿದೆ. ಸಮಾಜದಲ್ಲಿ ಮಾನಸಿಕವಾಗಿ ಬಳಲುತ್ತಿರುವವರ ಬಗ್ಗೆ ತಪ್ಪು ಕಲ್ಪನೆಯ ಬದಲಾಗಿ ಅವರಿಗೆ ಚೈತನ್ಯ ತುಂಬುವ ಮನೋಪ್ರವೃತ್ತಿ ಮೂಡಬೇಕಾಗಿದೆ ಎಂದರು.(ಮೊದಲ ಪುಟದಿಂದ) ರಾಜಕಾರಣಿಗಳು ಕೂಡ ಹಲವು ಸಂದರ್ಭ ಪರಸ್ಪರ ಟೀಕಿಸಲು ಹುಚ್ಚ ಎಂಬ ಪದ ಬಳಕೆ ಮಾಡುತ್ತಾರೆ. ಆದರೆ ರಾಜಕಾರಣಿಗಳಿಗಿಂತ ಮಾನಸಿಕ ಅಸ್ವಸ್ತರು ಎಷ್ಟೋ ಉತ್ತಮ ಮಾನಸಿಕ ಆರೋಗ್ಯ ಹೊಂದಿರುತ್ತಾರೆ ಎಂದು ಕುಟುಕಿದ ಡಾ. ಮುರುಗೇಶ್ ವೈಷ್ಣವ್, ಮಾನಸಿಕ ಚಿಕಿತ್ಸಾ ಪದ್ಧತಿ ಸಂಬಂಧಿತ ಹಲವಾರು ತಿದ್ದುಪಡಿಗಳು ಸಂವಿಧಾನದ ಮೂಲಕ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ದೇಶದ ಹಲವೆಡೆಗಳ ಸಂಸದರ ಮೂಲಕ ಮುಂದಿನ ಲೋಕಸಭಾ ಅಧಿವೇಶನದಲ್ಲಿ ಕಾನೂನು ತಿದ್ದುಪಡಿಗೆ ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ. ಕಾರ್ಯಪ್ಪ ಮಾತನಾಡಿ, ದೇಶದ ಹಲವೆಡೆಗಳಿಂದ 850ಕ್ಕೂ ಅಧಿಕ ಮನೋವೈದ್ಯರು ಪಾಲ್ಗೊಂಡಿರುವ ಈ ಸಮ್ಮೇಳನಕ್ಕೆ ಸಹಕಾರ ನೀಡಿದ್ದು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೆಮ್ಮೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ದಕ್ಷಿಣ ಭಾರತ ಮನೋವೈದ್ಯರ ಸಂಘದ ನಿರ್ಗಮಿತ ಅಧ್ಯಕ್ಷ ಡಾ.ಎ.ಜಗದೀಶ್ ಮಾತನಾಡಿ, ರಾಷ್ಟ್ರೀಯ ಕ್ರೀಡೆಯಾದ ಹಾಕಿಯನ್ನು ಪ್ರಮುಖ ಕ್ರೀಡೆಯಾಗಿ ಹೊಂದಿರುವ ಕೊಡಗಿನ ರಾಜಧಾನಿ ಮಡಿಕೇರಿಯಲ್ಲಿ ಇಷ್ಟೊಂದು ಬೃಹತ್ ಸಮಾವೇಶವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದು, ತೃಪ್ತಿ ತಂದಿದೆ ಎಂದರಲ್ಲದೇ 2027ರ ವೇಳೆಗೆ ದೇಶದಲ್ಲಿ ಜಾಗತಿಕ ಗುಣಮಟ್ಟದ ಮನೋವೈದ್ಯಕೀಯ ಚಿಕಿತ್ಸಾ ಪದ್ಧತಿ ಅಳವಡಿಕೆ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ಸಾಗಿದೆ ಎಂದು ಮಾಹಿತಿ ನೀಡಿದರು. ಮಾದಕ ವ್ಯಸನಿಗಳಾಗುತ್ತಿರುವ ಯುವ ಜನಾಂಗವನ್ನು ಆ ದುಶ್ಚಟದಿಂದ ಹೊರತರುವದು ಮನೋವೈದ್ಯರ ಪ್ರಮುಖ ಸವಾಲುಗಳಲ್ಲೊಂದು ಎಂದೂ ಡಾ.ಜಗದೀಶ್ ಹೇಳಿದರು.
ದಕ್ಷಿಣ ಭಾರತ ಮನೋವೈದ್ಯರ ಸಂಘಧ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಡಾ.ಪಿ.ಕಿಶನ್, ದಕ್ಷಿಣ ಭಾರತದಲ್ಲಿ ಮನೋ ವೈದ್ಯರ ಸಂಘಕ್ಕೆ ಸದಸ್ಯರ ಸಂಖ್ಯೆ ವೃದ್ಧಿಸುವ ಗುರಿಯೊಂದಿಗೆ, ಯೋಗ ವಿಧಾನದ ಮೂಲಕ ಮಾನಸಿಕವಾಗಿ ಬಳಲುವವರಿಗೆ ಸೂಕ್ತ ಚಿಕಿತ್ಸಾ ವಿಧಾನ ಅಳವಡಿಸಲು ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದರು.
ಸಂಘಧ ಕಾರ್ಯದರ್ಶಿ ಡಾ. ಮಹೇಶ್ ಗೌಡ, ವಲಯ ಕಾರ್ಯ ದರ್ಶಿ ಡಾ. ನರೇಶ್ ವಡ್ಲಮಣಿ, ಖಚಾಂಜಿ ಡಾ. ಕೆ. ಗಂಗಾರಾಮ್, ವಾರ್ತಾ ಸಂಚಿಕೆ ಸಂಪಾದಕ ಡಾ. ಸಾನ್ಯುವಲ್ ಅಮೀನ್, ಮಡಿಕೇರಿ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಎ.ಜೆ. ಲೋಕೇಶ್ ವೇದಿಕೆಯಲ್ಲಿದ್ದು ಕಾರ್ಯಕ್ರಮದಲ್ಲಿ ಜಾಹ್ನವಿ ಪ್ರಾರ್ಥಿಸಿದರು.
ಮನೋವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದ ಹಲವೆಡೆಗಳಿಂದ ಬಂದಿರುವ ಪರಿಣಿತ ವೈದ್ಯರು ಪ್ರಮುಖ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿದರು.