ಮಡಿಕೇರಿ, ಅ. 19: ನಗರದ ಗಾಲ್ಫ್ ಮೈದಾನ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಕೊಡಗು ಜಿಲ್ಲಾ ಪಂಚಾಯತ್ ಆಡಳಿತ ಭವನ ಕಟ್ಟಡವನ್ನು ತಾ. 25 ರಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಸಂಬಂಧ ಜಿಲ್ಲಾಡಳಿತ ಮುಖ್ಯ ಮಂತ್ರಿಗಳ ಆಗಮನ ವೇಳೆ ಸ್ವಾಗತದೊಂದಿಗೆ, ಜಿ.ಪಂ. ಕಟ್ಟಡದ ಲೋಕಾರ್ಪಣೆ ಸಂಬಂಧ ಪೂರ್ವ ತಯಾರಿಯಲ್ಲಿ ತೊಡಗಿದೆ.ಈ ಸಂಬಂಧ ಇಂದು ಜಿಲ್ಲಾ ಪಂಚಾಯತ್ ನೂತನ ಆಡಳಿತ ಭವನವನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಖುದ್ದಾಗಿ ಪರಿಶೀಲನೆ ನಡೆಸಿತು. ಅಲ್ಲದೆ ತಾ. 25 ರಂದು ರಾಜ್ಯದ ಮುಖ್ಯ ಮಂತ್ರಿಗಳು ಆಗಮಿಸುವ ವೇಳೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.ಜಿ.ಪಂ. ನೂತನ ಆಡಳಿತ ಭವನವನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಾ. 25 ರಂದು ಲೋಕರ್ಪಾಣೆಗೊಳಿಸುವ ದಿಸೆಯಲ್ಲಿ ಸಭಾ ಕಾರ್ಯಕ್ರಮ ಆಯೋಜನೆ ಕುರಿತು ಸುದೀರ್ಘ ಚರ್ಚಿಸಲಾಯಿತು.ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ ಹಾಗೂ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮತ್ತು ಇತರ ಇಲಾಖೆ ಅಧಿಕಾರಿಗಳು ಈ ದಿಸೆಯಲ್ಲಿ ಖುದ್ದು ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿದರು.ಕೊಡಗು ಜಿಲ್ಲಾ ಪಂಚಾಯತ್ ನೂತನ ಆಡಳಿತ ಭವನ ಲೋಕಾರ್ಪಣೆಗಾಗಿ ಮುಖ್ಯಮಂತ್ರಿಗಳ ಆಗಮನ ವೇಳೆ ಕಿಷ್ಕಿಂದೆ ಉಂಟಾಗದಂತೆ ಅನುಸರಿಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಈ ಸಂದರ್ಭ ಪೊಲೀಸ್ ಅಧಿಕಾರಿ ಗಳೊಂದಿಗೆ ಸಮಾಲೋಚನೆ ನಡೆಯಿತು.

ಕ್ರಿಸ್ಟಲ್ ಕೋರ್ಟ್‍ನಲ್ಲಿ ಸಭೆ

ಈಗಿನ ಪ್ರಕಾರ ಮಳೆ ಇತ್ಯಾದಿ ಸಮಸ್ಯೆ ಎದುರಾಗದಂತೆ ಸಾಕಷ್ಟು ಮುನ್ನೆಚ್ಚರಿಕೆಗಾಗಿ ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ಆಗಮನ ವೇಳೆ ಸಭೆ ಆಯೋಜಿಸಲು ಕೂಡ ಅಧಿಕಾರಿಗಳ ತಂಡ ಖುದ್ದು ವೀಕ್ಷಣೆ ಮಾಡಿತು.

ಆ ಮುನ್ನ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನವನ್ನು ಕೂಡ ವೀಕ್ಷಿಸಿ, ಸಾಧ್ಯಸಾಧ್ಯತೆ ಕುರಿತು ಚರ್ಚೆ ನಡೆಸಲಾಯಿತು.

ಉಸ್ತುವಾರಿ ಸಚಿವರೊಂದಿಗೆ ಚರ್ಚೆ

ಈ ಸಂಬಂಧ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ದೂರವಾಣಿ ಮುಖಾಂತರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಮತ್ತು ಸ್ಥಳೀಯ ಶಾಸಕರುಗಳೊಂದಿಗೆ ಅಭಿಪ್ರಾಯ ಪಡೆದುಕೊಂಡರಲ್ಲದೆ, ಜಿಲ್ಲಾಡಳಿತದ ಗಮನ ಸೆಳೆದು ಕಾರ್ಯಕ್ರಮ ಸುಗಮವಾಗಿ ಆಯೋಜಿಸುವ ಬಗ್ಗೆ ಸಲಹೆಗಳನ್ನು ನೀಡಿದರು.

ಕಾರ್ಯಕ್ರಮ ವಿವರ

ಈಗ ‘ಶಕ್ತಿ’ಗೆ ಲಭಿಸಿರುವ ಮಾಹಿತಿಯಂತೆ ತಾ. 25 ರಂದು 10.45ರ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ನಗರದ ಗಾಲ್ಫ್ ಮೈದಾನಕ್ಕೆ ಆಗಮಿಸುವ ಮುಖ್ಯಮಂತ್ರಿಗಳು, ಜಿ.ಪಂ. ಆಡಳಿತ ಭವನ ಲೋಕಾ ರ್ಪಣೆಗೊಳಿಸಿ, ಅಲ್ಲಿಂದ ಕರ್ಣಂಗೇರಿ ಗ್ರಾಮದಲ್ಲಿ ನಿರ್ಮಿಸಿರುವ ಪುನರ್ ವಸತಿ ಗೃಹಗಳ ವೀಕ್ಷಣೆ ಮಾಡಲಿದ್ದಾರೆ.

(ಮೊದಲ ಪುಟದಿಂದ) ಅನಂತರ ನೇರವಾಗಿ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ನಿಗದಿಗೊಳಿಸಿದÀ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಭಾ ಕಾರ್ಯಕ್ರಮ ಬಳಿಕ ಮಧ್ಯಾಹ್ನದ ಭೋಜನ ಸ್ವೀಕರಿಸಿ, ಅನಂತರ ರಾಜಧಾನಿಗೆ ಹಿಂತೆರಳಲಿದ್ದಾರೆ. ಮುಖ್ಯಮಂತ್ರಿಗಳ ಭೇಟಿ ಸಂಬಂಧ ಪೂರ್ವ ತಯಾರಿ ಪರಿವೀಕ್ಷಣೆ ವೇಳೆ ಉಪವಿಭಾಗಾಧಿಕಾರಿ ಟಿ. ಜವರೇಗೌಡ, ವಿವಿಧ ಇಲಾಖೆಗಳ ಅಭಿಯಂತರುಗಳಾದ ಇಬ್ರಾಹಿಂ, ಪ್ರಭು, ಶ್ರೀಕಂಠಯ್ಯ, ಚಂದ್ರಶೇಖರ್, ಚನ್ನಕೇಶವ, ಪೊಲೀಸ್ ಅಧಿಕಾರಿಗಳಾದ ಬಿ.ಪಿ. ದಿನೇಶ್, ಅನೂಪ್ ಮಾದಪ್ಪ, ಐ.ಪಿ. ಮೇದಪ್ಪ, ಸದಾಶಿವಯ್ಯ, ದಿವಾಕರ್, ಚೇತನ್ ಮೊದಲಾದವರು ಹಾಜರಿದ್ದು, ಮಾಹಿತಿ ಒದಗಿಸಿದರು.ತಾ. 25 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡುವ ಸಂಬಂಧ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತಾ. 25 ರಂದು ಮುಖ್ಯಮಂತ್ರಿಗಳು ಜಿಲ್ಲಾ ಪಂಚಾಯತ್ ನೂತನ ಕಟ್ಟಡ ಉದ್ಘಾಟನೆ ಹಾಗೂ ಕರ್ಣಂಗೇರಿಯಲ್ಲಿ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನಿರ್ಮಿಸಲಾಗಿರುವ ಮನೆಗಳ ಹಸ್ತಾಂತರ ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾ. 25 ರಂದು ಬೆಳಗ್ಗೆ 10.45 ಗಂಟೆಗೆ ಮಡಿಕೇರಿಗೆ ಆಗಮಿಸಲಿದ್ದು, ಕರ್ಣಂಗೇರಿಯಲ್ಲಿ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರ ಮಾಡಲಿದ್ದಾರೆ. ನಂತರ ಜಿಲ್ಲಾ ಪಂಚಾಯತ್ ನೂತನ ಕಟ್ಟಡವನ್ನು ಉದ್ಘಾಟನೆ ನಡೆಸಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕ್ರೀಡಾ ಸಚಿವ ಕೆ.ಎಸ್. ಈಶ್ವರಪ್ಪ ಅವರು ಪಾಲ್ಗೊಳ್ಳಲಿದ್ದು, ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ವಿವಿಧ ಇಲಾಖೆಗಳಲ್ಲಿ ಗುದ್ದಲಿ ಪೂಜೆ, ಉದ್ಘಾಟನೆಗೆ ಸಿದ್ಧಗೊಂಡಿರುವ ಯೋಜನೆಗಳ ಮಾಹಿತಿಯನ್ನು ತುರ್ತಾಗಿ ಕಚೇರಿಗೆ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಮಾತನಾಡಿ ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಅಗತ್ಯ ಬಂದೋಬಸ್ತ್ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳು ವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿ.ಪಂ. ಸಿಇಒ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಜಿ.ಪಂ. ನೂತನ ಕಟ್ಟಡ ಕಾಮಗಾರಿ ಮುಗಿದಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವದು ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಮಡಿಕೇರಿ ಡಿಎಫ್‍ಒ ಪ್ರಭಾಕರನ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಜಿ.ಪಂ. ಉಪಕಾರ್ಯದರ್ಶಿ ಗುಡೂರು ಭೀಮಸೇನ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶ್ರೀನಿವಾಸ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಇಇ ಪ್ರಭು, ಲೋಕೋಪಯೋಗಿ ಇಲಾಖೆಯ ಇಇ ಇಬ್ರಾಹಿಂ, ಐಟಿಡಿಪಿ ಅಧಿಕಾರಿ ಶಿವಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್, ನಗರಸಭೆ ಆಯುಕ್ತ ರಮೇಶ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇ ರೇವಣ್ಣ, ಪ್ರವಾಸೋದ್ಯಮ ಅಧಿಕಾರಿ ರಾಘವೇಂದ್ರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆಂಚಪ್ಪ, ಇತರರು ಇದ್ದರು.