ಮಡಿಕೇರಿ, ಅ. 19: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಡಿಕೇರಿ ರಕ್ಷಣಾ ವೇದಿಕೆ ವತಿಯಿಂದ ನಗರಸಭೆ ಕಚೇರಿ ಎದುರು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಯಿತು.

ಕೊಡಗಿಗೆ ಎಮರ್ಜೆನ್ಸಿ ಆಸ್ಪತ್ರೆ ಬೇಕು ಎಂಬ ಕೋರಿಕೆಗೆ ಸಂಬಂಧಿಸಿದಂತೆ ಮಡಿಕೇರಿ ನಗರಸಭೆ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ಕಳುಹಿಸಬೇಕು. ಮಡಿಕೇರಿ ಜನರ ಆರೋಗ್ಯಕ್ಕೆ ಮಾರಕವಾಗಿರುವ ಸ್ಟೋನ್ ಹಿಲ್ ಬಳಿಯ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಮಡಿಕೇರಿ - ನಗರದ ರಸ್ತೆಗಳ ದುರಾವಸ್ಥೆಗೆ ಕಾರಣವಾದ ರೂ.45 ಕೋಟಿ ವೆಚ್ಚದ ಯುಜಿಡಿ ಯೋಜನೆ ಬಗ್ಗೆ ಸಿಬಿಐ ತನಿಖೆ ಆಗಬೇಕು. ಸಂಚಾರಕ್ಕೆ ಅಯೋಗ್ಯವಾಗಿರುವ ಮಡಿಕೇರಿ ನಗರದ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಕುಡಿಯುವ ನೀರಿನ ಮೂಲವಾದ ಕೂಟುಹೊಳೆಯ ಹೂಳನ್ನು ತೆಗೆಸಿ ಜಲಾಶಯವನ್ನು ಸುಸ್ಥಿತಿಗೆ ತರಬೇಕು. ಮಡಿಕೇರಿ ನಗರದ ಬೀದಿಗಳಲ್ಲಿ ಬೀದಿನಾಯಿಗಳ ಹಾವಳಿಯನ್ನು ತಡೆಯಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ನಡೆಯಿತು.

ಪ್ರತಿಭಟನೆಯಲ್ಲಿ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ, ಉಪಾಧ್ಯಕ್ಷ ಗಜೇಂದ್ರ, ಕಾರ್ಯದರ್ಶಿ ಕೊಟ್ಟಕೇರಿಯನ ಅಜಿತ್, ಪ್ರಧಾನ ಕಾರ್ಯದರ್ಶಿ ಬಿ.ಎಂ. ಹರೀಶ್ ಮತ್ತಿತರರು ಪಾಲ್ಗೊಂಡಿದ್ದರು.