ನಾಪೆÇೀಕ್ಲು, ಅ. 20: ರಸ್ತೆಯಲ್ಲಿ ಗುಂಡಿ ಇರುವದು ಸರ್ವೇ ಸಾಮಾನ್ಯ. ಆದರೆ ಗುಂಡಿಯ ನಡುವೆ ರಸ್ತೆಯನ್ನು ಹುಡುಕುವ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಬಲ್ಲಮಾವಟಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ನೆಲಜಿ - ಪೇರೂರು ಮೂಲಕ ಬಲ್ಲಮಾವಟಿಗೆ ಸಂಪರ್ಕ ಕಲ್ಪಿಸುವ ರಸ್ತೆ. ಈ ನಾಲ್ಕು ಕಿ.ಮೀ ರಸ್ತೆಯಲ್ಲಿ ಎರಡು ಕಿ.ಮೀ ರಸ್ತೆಯು ತೀರಾ ಗುಂಡಿಯಿಂದ ಕೂಡಿದ್ದು, ವಾಹನ ಸಂಚಾರ ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯ ಮೂಲಕ ಪೇರೂರು ಶ್ರೀ ಪೆರ್ಮೆ ಇಗ್ಗುತ್ತಪ್ಪ ದೇವಳ, ಮಚ್ಚಾರೋಡೆ ಮಂದ್ ಸೇರಿದಂತೆ ಬೆಟ್ಟ ಪ್ರದೇಶಗಳಿಗೆ ಸಾಗಬೇಕಿದೆ. ಆದರೆ ಈ ರಸ್ತೆ ಹದಗೆಟ್ಟಿರುವದರಿಂದ ಈ ಪ್ರದೇಶದಲ್ಲಿ ಯಾವದೇ ಆಟೋ ರಿಕ್ಷಾಗಳು ಕೂಡ ಓಡಾಡುತ್ತಿಲ್ಲ. ಈ ರಸ್ತೆಯ ಮೂಲಕ ದಿನಕ್ಕೆ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಒಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಓಡಾಡುತ್ತಿದೆ. ಉಳಿದ ಬಸ್ಸುಗಳನ್ನು ರಸ್ತೆ ಹಾಳಾಗಿರುವ ಕಾರಣ ಸ್ಥಗಿತ ಗೊಳಿಸಲಾಗಿದೆ ಎನ್ನುತ್ತಾರೆ ಗ್ರಾಮದವರಾದ ಪಾಲೆಯಡ ಸಬಿತಾ ಚಿಣ್ಣಪ್ಪ.

ನಾಲ್ಕು ಕಿ.ಮೀ ರಸ್ತೆಗೆ ಎರಡು ದೊಣ್ಣೆ ನಾಯಕರು ಎಂಬಂತೆ ಎರಡು ಕಿ.ಮೀ ರಸ್ತೆ ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿದ್ದರೆ, ಇನ್ನುಳಿದ ಎರಡು ಕಿ.ಮೀ ರಸ್ತೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಎರಡು ಕಿ.ಮೀ ರಸ್ತೆ ವಾಹನ ಸಂಚಾರಕ್ಕೆ ಯೋಗ್ಯವಾಗಿದ್ದು, ಜಿಲ್ಲಾ ಪಂಚಾಯಿತಿಗೆ ಒಳಪಟ್ಟ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಆದ್ದರಿಂದ ಈ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸುವ ಮೂಲಕ ಸಾರ್ವಜನಿಕರಿಗೆ ಅನುವು ಮಾಡಿಕೊಡಬೇಕೆಂದು ಮೂವೆರ ವಿನು ಬಿದ್ದಪ್ಪ, ಆನೆಯಡ ರಾಜಪ್ಪ, ಮತ್ತಿತರರು ಆಗ್ರಹಿಸಿದ್ದಾರೆ. -ಪಿ.ವಿ. ಪ್ರಭಾಕರ್