ಗೋಣಿಕೊಪ್ಪ ವರದಿ, ಅ. 19 : ಹಾತೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಭತ್ತದ ಬೆಳೆ ಮೇಲೆ ದಾಳಿ ಮಾಡಿರುವ ಕಾಡಾನೆಗಳು ಕದಿರು ತಿಂದು ಹೊಟ್ಟೆ ತುಂಬಿಸಿಕೊಂಡಿದೆ.

ಗ್ರಾಮದ ಕೃಷಿಕ ಮದುಸೂದನ್ ಎಂಬವರ ಗದ್ದೆಯ ಸುಮಾರು 1 ಎಕರೆಯಷ್ಟು ಭತ್ತದ ಬೆಳೆಯನ್ನು ನಾಶ ಮಾಡಿವೆ. ಸುಮಾರು 10 ಸಾವಿರಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಕೃಷಿಕ ಮದುಸೂಧನ್ ಬೇಸರ ವ್ಯಕ್ತಪಡಿಸಿದ್ದಾರೆ.

ಹಲವು ದಿನಗಳಿಂದ ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ನಿರಂತರ ದಾಳಿ ಮಾಡುತ್ತಿವೆ. ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಸೂಕ್ತ ಸ್ಪಂದನೆ ದೊರೆತಿಲ್ಲ. ಕಾಡಾನೆಗಳು ಗ್ರಾಮ ದಲ್ಲಿಯೇ ಬೀಡು ಬಿಟ್ಟಿರುವದರಿಂದ ಭಯದ ವಾತಾವರಣ ಮೂಡಿದೆ. ಅರಣ್ಯ ಇಲಾಖೆ ಬೆಳೆ ರಕ್ಷಣೆಗೆ ಯೋಜನೆ ರೂಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಆಲೂರುಸಿದ್ದಾಪುರ : ರೈತರ ಕಾಫಿ, ಬಾಳೆತೋಟ ಮತ್ತು ಗದ್ದೆಗೆ ನುಸುಳಿದ ಕಾಡಾನೆ ಅಪಾರ ಪ್ರಮಾಣದಲ್ಲಿ ಕೃಷಿ ಬೆಳೆಗಳನ್ನು ತುಳಿದು ಧ್ವಂಸಗೊಳಿಸಿದ ಘಟನೆ ಮಾಲಂಬಿ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಸಮೀಪದ ಮಾಲಂಬಿ- ಕೂಡುರಸ್ತೆ ಗ್ರಾಮದ ಪಕ್ಕದಲ್ಲಿರುವ ದೊಡ್ಡೇರೆ ಮೀಸಲು ಅರಣ್ಯದಿಂದ ಬಂದ ಒಂಟಿ ಸಲಗವೊಂದು ಗ್ರಾಮದ ಸಿ.ಕೆ.ಗಣೇಶ್ ಮತ್ತು ಅವರ ಸಹೋದರ ಸಿ.ಕೆ. ದುರ್ಗರಾಜು ಎಂಬವರಿಗೆ ಸೇರಿದ ಕಾಫಿ ಮತ್ತು ಬಾಳೆತೋಟ ಹಾಗೂ ಗದ್ದೆಗೆ ನುಸುಳಿ ಕಾಫಿ, ಬಾಳೆಗಿಡ, ಸಿಹಿ ಗೆಣಸು ಹಾಗೂ ಗದ್ದೆಯಲ್ಲಿ ಫಸಲಿಗೆ ಬಂದಿದ್ದ ಭತ್ತದ ಪೈರನ್ನು ತುಳಿದು ಧ್ವಂಸಗೊಳಿಸಿದೆ. ಸುಮಾರು ರೂ. 35 ಸಾವಿರ ಮೌಲ್ಯದ ಕೃಷಿ ಬೆಳೆ ಫಸಲು ನಷ್ಟವಾಗಿರುವದಾಗಿ ರೈತರು ಅರಣ್ಯ ಇಲಾಖೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.