ಮಡಿಕೇರಿ, ಅ. 19 : ನಗರದ ಪ್ರತಿಷ್ಠಿತ ಖಾಸಗಿ ಶಾಲೆಯೊಂದು ಒತ್ತುವರಿ ಸುಳಿಯಲ್ಲಿ ಸಿಲುಕಿಕೊಂಡಿದ್ದು, ಹೈಕೋರ್ಟ್‍ನ ವಕೀಲ ಅಮೃತೇಶ್ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಮುಂದಾಗಿದ್ದು, ಕ್ರಮಕ್ಕೆ ಒತ್ತಾಯಿಸಿ ಕೊಡಗು ಜಿಲ್ಲಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರಿಗೆ ದಾಖಲಾತಿಗಳನ್ನೊಳಗೊಂಡ ದೂರು ಸಲ್ಲಿಸಿದ್ದಾರೆ.

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿರುವ ಖಾಸಗಿ ಶಾಲೆ ವಿವಾದದ ಕೇಂದ್ರ ಬಿಂದುವಾಗಿದ್ದು, ಪ್ರೌಢಶಾಲೆಗೆ ಅನುಮತಿಯನ್ನು ಅಂದಿನ ಬ್ರಿಟಿಷ್ ಸರ್ಕಾರ ನೀಡಿತ್ತು. ಆದರೆ ಅಳತೆ ಮೀರಿ ಭೂ ಒತ್ತುವರಿಗೊಳಿಸಿ ವಾಣಿಜ್ಯ ಸಂಕೀರ್ಣ ಸೇರಿದಂತೆ ವಿವಿಧ ವಿಷಯಗಳಿಗೆ ಭೂ ಬಳಕೆಯಾಗಿದೆ ಎಂಬ ಆರೋಪ ವಕೀಲರಿಂದ ವ್ಯಕ್ತವಾಗಿದೆ.

20-11-1946ರಲ್ಲಿ ಬ್ರಿಟಿಷ್ ಆಡಳಿತ ಅವಧಿಯಲ್ಲಿ ಮಡಿಕೇರಿ ನಗರದ ಹೃದಯ ಭಾಗದಲ್ಲಿ 2.65 ಎಕ್ರೆ ಪೈಕಿ 0.07 ಎಕರೆ ಚರ್ಚ್, 0.04 ಎಕರೆ, ಧರ್ಮಗುರುವಿನ ವಸತಿಗಾಗಿ, 0.03 ಎಕರೆ ಅಡುಗೆ ಕೋಣೆ, 2.65 ಎಕರೆ ಪ್ರೌಢಶಾಲಾ ಮತ್ತು ತಡೆಗೋಡೆ ನಿರ್ಮಾಣಕ್ಕೆಂದು ನೀಡಲಾಗಿತ್ತು. ಆದರೆ ಬಳಿಕ ಸಂಸ್ಥೆ ಮಾನದಂಡ ಉಲ್ಲಂಘಿಸಿ ಶಾಲಾ ಕಟ್ಟಡ ನಿರ್ಮಿಸುವದರ ಜತೆಗೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದೆ, ಜತೆಗೆ ಪೆಟ್ರೋಲ್ ಬಂಕ್‍ಗೂ ಅವಕಾಶ ಕಲ್ಪಿಸಿದ್ದು, ಇದು ಕೂಡ ನಿಯಮ ಬಾಹಿರ ಎಂದು ವಕೀಲ ಅಮೃತೇಶ್ ಆರೋಪಿಸಿದ್ದಾರೆ.

2001ರಲ್ಲಿ ಮುಖ್ಯರಸ್ತೆಯ ಸಣ್ಣ ಮಳಿಗೆಗಳನ್ನು ತೆರವುಗೊಳಿಸಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಅನುಮತಿ ಕಲ್ಪಿಸಬೇಕೆಂದು ನಗರಸಭೆಗೆ ಮನವಿ ಸಲ್ಲಿಸಿದ ಸಂದರ್ಭ ಸಂಸ್ಥೆಯ ಜಾಗಕ್ಕೆ ಸಮರ್ಪಕ ದಾಖಲಾತಿಗಳಿಲ್ಲ ಎಂದು ಹೇಳಿತ್ತು. ಜಾಗದ ಮರು ಸರ್ವೆಗೆ ವಕೀಲ ಅಮೃತೇಶ್ ಒತ್ತಾಯಿಸಿದ್ದಾರೆ. ಈ ಸಂದರ್ಭ ವಕೀಲ ಕೃಷ್ಣಮೂರ್ತಿ ಇದ್ದರು.